ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಇಂಗ್ಲೆಂಡ್ ತಂಡವು ಬಾಂಗ್ಲಾದೇಶವನ್ನು 137 ರನ್‌ಗಳಿಂದ ಮಣಿಸಿದೆ.
ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದು ಅದು ತಪ್ಪು ಎಂದು ಸಾಬೀತಾಗಿದೆ. ಇಂಗ್ಲೆಂಡ್ ಪರ ಬ್ಯಾಟರ್ ಗಳು ಅತ್ಯುತ್ತಮ ಪ್ರದರ್ಶನ ನೀಡಿದರು.
ಡೇವಿಡ್ ಮಲಾನ್ ಸ್ಫೋಟಕ ಬ್ಯಾಟಿಂಗ್ ಮಾಡಿ 140 ರನ್ ಗಳಿಸಿದರು. ಜೋ ರೂಟ್ 82 ರನ್ ಕೊಡುಗೆ ನೀಡಿದರು. ನಾಯಕ ಜೋಸ್ ಬಟ್ಲರ್ ಮತ್ತು ಹ್ಯಾರಿ ಬ್ರೂಕ್ ತಲಾ 20 ರನ್ ಗಳಿಸಿದರು. ಈ ಆಟಗಾರರಿಂದಲೇ ಇಂಗ್ಲೆಂಡ್ ತಂಡ 364 ರನ್ ಗಳಿಸಲು ಸಾಧ್ಯವಾಯಿತು.
ದುಬಾರಿಯದ ಬಾಂಗ್ಲಾ ಬೌಲರ್ ಗಳು
ಬಾಂಗ್ಲಾದೇಶ ಪರ ಮೆಹದಿ ಹಸನ್ ಗರಿಷ್ಠ 4 ವಿಕೆಟ್ ಪಡೆದರು. ಆದರೆ ಅವರು ತುಂಬಾ ದುಬಾರಿ ಎನಿಸಿಕೊಂಡರು. ಹಸನ್ 8 ಓವರ್‌ಗಳಲ್ಲಿ 71 ರನ್ ನೀಡಿದರು. ಇದಲ್ಲದೇ ಶೋರಿಫುಲ್ ಇಸ್ಲಾಂ 3 ವಿಕೆಟ್ ಪಡೆದರು. ತಸ್ಕಿನ್ ಅಹ್ಮದ್ ಮತ್ತು ಶಕೀಬ್ ಅಲ್ ಹಸನ್ ಖಾತೆಗೆ ತಲಾ ಒಂದು ವಿಕೆಟ್ ಹೋಯಿತು. ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶದ ಬೌಲರ್‌ಗಳು ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯಾಗಿದ್ದರು.
365 ರನ್ ಗಳ ದೊಡ್ಡ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಜೀದ್ ಹಸನ್ 1 ರನ್ ಗಳಿಸಿದ್ದು ನಜ್ಮುಲ್ ಹಸನ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಮುಷ್ಕಿಫುಕರ್ ರಹೀಮ್ ಮತ್ತು ಲಿಟನ್ ದಾಸ್ ಅರ್ಧಶತಕ ಗಳಿಸಿದರು. ಆದರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಬಾಂಗ್ಲಾದೇಶ ತಂಡ 227 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ರೀಸ್ ಟೋಪ್ಲಿ ಗರಿಷ್ಠ 4 ವಿಕೆಟ್ ಪಡೆದರು.