ಢಾಕಾ: ಹೆಂಡತಿ ಕೆಲಸಕ್ಕೆ ಹೋದರೆ ಗಂಡಿನ ಜೀವನ ಸರ್ವನಾಶ ಎಂಬರ್ಥದಲ್ಲಿ ಬಾಂಗ್ಲಾದೇಶ ಸ್ಟಾರ್ ಕ್ರಿಕೆಟಿಗ ಹೇಳಿಕೆ ನೀಡಿದ್ದು ಕ್ರಿಕೆಟಿಗನ ಈ ಹೇಳಿಕೆ ಇದೀಗ ಬಾಂಗ್ಲಾದೇಶದಲ್ಲಿ ಮಹಿಳಾ ಸಂಘಟನೆಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್ ಕ್ರಿಕೆಟ್ ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ತಮ್ಮ ನಾಲ್ಕನೇ ಎಸೆತದಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದು ಮಿಂಚಿದ್ದ ಬಾಂಗ್ಲಾದೇಶ ಬೌಲರ್ ತಂಜಿಮ್ ಹಸನ್ ಸಾಕಿಬ್ ಇಂತಹ ಹೇಳಿಕೆ ಇರುವ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಅಲ್ಲದೆ ಮಹಿಳಾ ಮಣಿಯರ ಕೆಂಗಣ್ಣಿಗೆ ತುತ್ತಾಗಿದೆ.
20 ವರ್ಷ ವಯಸ್ಸಿನ ತಂಜಿಮ್ ಹಸನ್ ಸಾಕಿಬ್ ತನ್ನ ಪೋಸ್ಟ್ ನಲ್ಲಿ "ಹೆಂಡತಿ ಕೆಲಸಕ್ಕೆ ಹೋದರೆ, ಗಂಡನ ಹಕ್ಕುಗಳು ಖಾತ್ರಿಯಾಗುವುದಿಲ್ಲ".. “ಹೆಂಡತಿ ದುಡಿದರೆ ಮಗುವಿನ ಹಕ್ಕು ಖಾತ್ರಿಯಾಗುವುದಿಲ್ಲ, ಹೆಂಡತಿ ದುಡಿದರೆ ಸೊಬಗು ಕೆಡುತ್ತದೆ, ಹೆಂಡತಿ ದುಡಿದರೆ ಸಂಸಾರ ಹಾಳಾಗುತ್ತದೆ, ಹೆಂಡತಿ ದುಡಿದರೆ ಮುಸುಕು ಹಾಳಾಗುತ್ತದೆ, ಹೆಂಡತಿ ದುಡಿದರೆ ಸಮಾಜ ಹಾಳಾಗುತ್ತದೆ ಮತ್ತು ಹಾಳಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ತಂಝಿಮ್ ಅವರು "ವಿಶ್ವವಿದ್ಯಾಲಯದಲ್ಲಿ ತನ್ನ ಪುರುಷ ಸ್ನೇಹಿತರೊಂದಿಗೆ ಮುಕ್ತವಾಗಿ ಬೆರೆಯಲು ಒಗ್ಗಿಕೊಂಡಿರುವ ಮಹಿಳೆಯನ್ನು ಮದುವೆಯಾದರೆ ಅವರ ಪುತ್ರರಿಗೆ "ಸಾಧಾರಣ" ತಾಯಿ ಇರುವುದಿಲ್ಲ ಎಂದು ಪುರುಷರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಏಷ್ಯಾಕಪ್ ಗೆದ್ದುಕೊಟ್ಟ ಸಿರಾಜ್ ಗೆ ಎಸ್ ಯುವಿ ನೀಡಿ ಎಂದ ಫ್ಯಾನ್ಸ್ ಗೆ ಆನಂದ್ ಮಹೀಂದ್ರ ರಿಪ್ಲೈ, ಟ್ವೀಟ್ ವೈರಲ್
ಈ ಪೋಸ್ಟ್ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸ್ತ್ರೀದ್ವೇಷದ ಹೇಳಿಕೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಬೆಳಕಿಗೆ ಬಂದ ನಂತರ ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಸ್ತ್ರೀವಾದಿಗಳು ವ್ಯಾಪಕ ಟೀಕೆ ಮಾಡುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶದ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಕಾರಣವಾದ ಗಾರ್ಮೆಂಟ್ ಫ್ಯಾಕ್ಟರಿಗಳ ಬಹುಪಾಲು ಉದ್ಯೋಗಿಗಳು ಮಹಿಳೆಯರೇ ಆಗಿದ್ದು, ಆದರೆ ಬಹುಸಂಖ್ಯಾತ ಮುಸ್ಲಿಂ ದೇಶದಲ್ಲಿ ಸಂಪ್ರದಾಯವಾದಿ ಪಿತೃಪ್ರಭುತ್ವದ ವರ್ತನೆಗಳು ವ್ಯಾಪಕವಾಗಿ ಉಳಿದಿವೆ.
ಕ್ರಿಕೆಟಿಗನ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ಯಾರಿಸ್ ಮೂಲದ ಸ್ತ್ರೀವಾದಿ ಲೇಖಕಿ ಜನ್ನತುನ್ ನಯೀಮ್ ಪ್ರಿತಿ ಅವರು ಟ್ವೀಟ್ ಮಾಡಿ, 'ಬಾಂಗ್ಲಾದೇಶ ತಂಡದ ಜೆರ್ಸಿಗಳನ್ನು ಹೆಚ್ಚಾಗಿ ಮಹಿಳೆಯರೇ ಇರುವ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ'. "ನಿಮ್ಮ ತಾಯಿಯನ್ನು ನೀವು ಸಾಮಾನ್ಯ ಮನುಷ್ಯ ಎಂದು ಪರಿಗಣಿಸದಿದ್ದಕ್ಕಾಗಿ ನಾನು ನಿಮ್ಮ ಬಗ್ಗೆ ವಿಷಾದಿಸುತ್ತೇನೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಬಾಂಗ್ಲಾದೇಶದ ಪತ್ರಕರ್ತೆ ಮೆಜ್ಬೌಲ್ ಹಕ್ ಸೋಮವಾರ ಈ ಬಗ್ಗೆ ಟೀಕೆ ಮಾಡಿದ್ದು, "ಇಂತಹ ವಿಕೃತ ರೂಪದ ಸ್ತ್ರೀದ್ವೇಷದ ಸ್ಥಿತಿಯು ಸ್ವೀಕಾರಾರ್ಹವಲ್ಲ. ಅವರು ಎಷ್ಟೇ ದೊಡ್ಡ ತಾರೆಯಾಗಿದ್ದರೂ ಸಹ!" ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ತನ್ನ ಆಟಗಾರನ ಟ್ವೀಟ್ ಪ್ರಸಂಗ ವ್ಯಾಪಕ ಆಕ್ರೋಶಕ್ಕೆ ತುತ್ತಾಗುತ್ತಲೇ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಿಸಿಬಿ (ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ) ತಿಳಿಸಿದೆ. "ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ನಾವು ವಿಷಯವನ್ನು ಪರಿಶೀಲಿಸುತ್ತಿದ್ದೇವೆ" ಎಂದು ಅದರ ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಜಲಾಲ್ ಯೂನಸ್ ಹೇಳಿದ್ದಾರೆ.