ಸುನೀಲ್ ಗವಾಸ್ಕರ್- ಹಾರ್ದಿಕ್ ಪಾಂಡ್ಯ
ಸುನೀಲ್ ಗವಾಸ್ಕರ್- ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

IPL 2024: ಹಾರ್ದಿಕ್ ಪಾಂಡ್ಯ ಬೌಲಿಂಗ್, ನಾಯಕತ್ವ ಕುರಿತು ಸುನೀಲ್ ಗವಾಸ್ಕರ್ ಟೀಕೆ!

Ramyashree GN

ಮುಂಬೈ: ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡವು ನಾಲ್ಕನೇ ಸೋಲು ಕಂಡ ನಂತರ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಮತ್ತು ಎಂಐ ನಾಯಕ ಹಾರ್ದಿಕ್ ಪಾಂಡ್ಯ ಟೀಕೆಗೆ ಗುರಿಯಾಗಿದ್ದಾರೆ. ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರು ಪಾಂಡ್ಯ ಅವರ ಬೌಲಿಂಗ್ ಮತ್ತು ನಾಯಕತ್ವ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ ಪಾಂಡ್ಯ ಅವರಿಗೆ ಅಭಿಮಾನಿಗಳಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ತಂಡ ಸೋಲು ಕಂಡ ನಂತರ ಮತ್ತಷ್ಟು ಹೆಚ್ಚಿದೆ. ಗವಾಸ್ಕರ್ ಮತ್ತು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕೂಡ ಪಾಂಡ್ಯ ವಿರುದ್ಧ ಕಿಡಿಕಾರಿದ್ದಾರೆ.

ಸಿಎಸ್‌ಕೆ ತಂಡದ ಪರವಾಗಿ ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಮಹೇಂದ್ರ ಸಿಂಗ್ ಧೋನಿ, ಹಾರ್ಧಿಕ್ ಪಾಂಡ್ಯ ಅವರ ಎಸೆತದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು ಮತ್ತು ಎರಡು ರನ್‌ಗಳ ಮೂಲಕ 20 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಎಂಐ ವಿರುದ್ಧ 20 ರನ್‌ಗಳ ಜಯ ಸಾಧಿಸಿತು.

'ಪಾಂಡ್ಯ ಅವರದ್ದು ಬೌಲಿಂಗ್, ನಾಯಕತ್ವ ಉತ್ತಮವಾಗಿರಲಿಲ್ಲ. ಸಿಎಸ್‌ಕೆ ಪರವಾಗಿ ಶಿವಂ ದುಬೆ ಮತ್ತು ರುತುರಾಜ್ ಗಾಯಕ್ವಾಡ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ, ಅವರನ್ನು ನಿರ್ಬಂಧಿಸಬೇಕಾಗಿತ್ತು. ಸಿಎಸ್‌ಕೆ ತಂಡವನ್ನು 185-190ಕ್ಕೆ ಕಟ್ಟಿಹಾಕಬೇಕಿತ್ತು. ಬಹುಶಃ ಇದು ನಾನು ದೀರ್ಘಕಾಲದಿಂದ ನೋಡಿದ್ದರಲ್ಲಿ ಅತ್ಯಂತ ಕೆಟ್ಟ ರೀತಿಯ ಬೌಲಿಂಗ್ ಆಗಿತ್ತು' ಎಂದು ಗವಾಸ್ಕರ್ ಹೇಳಿದ್ದಾರೆ.

'ಅವರು (ಧೋನಿ) ಸಿಕ್ಸರ್ ಹೊಡೆಯಲೆಂದೇ ಅಂತಹ ಎಸೆತಗಳನ್ನು ನೀಡಿದಂತಿತ್ತು. ಯಾವುದೇ ಬೌಲರ್‌ಗೆ ಒಂದು ಸಿಕ್ಸರ್ ಹೊಡೆಯುವುದು ಸಾಮಾನ್ಯ ಎಂದುಕೊಳ್ಳೋಣ. ಆದರೆ, ಈ ಬ್ಯಾಟರ್ ಸಿಕ್ಸರ್ ಹೊಡೆಯಲೆಂದೇ ನೋಡುತ್ತಿರುವುದು ತಿಳಿದಾಗ ಮತ್ತೊಂದು ಲೆಂತ್ ಬಾಲ್ ಹಾಕಿದ್ದು ಸರಿಯಲ್ಲ. ಬಳಿಕ ಮತ್ತೊಂದು ಫುಲ್ ಟಾಸ್ ಹಾಕಿದ್ದರಿಂದಲೇ ಅವರಿಗೆ ಮತ್ತೊಂದು ಸಿಕ್ಸರ್ ಹೊಡೆಯಲು ಸುಲಭವಾಯಿತು' ಎಂದರು.

ಪೀಟರ್ಸನ್ ಕಿಡಿ

'ಹಾರ್ದಿಕ್ ಪಾಂಡ್ಯ ಅವರ ಮೇಲೆ ಮೈದಾನದಲ್ಲಿನ ಅಭಿಮಾನಿಗಳ ಅಬ್ಬರವೂ ಸಹ ಪರಿಣಾಮ ಬೀರುತ್ತಿದೆ ಎಂದು ನಾನು ಭಾವಿಸುತ್ತೇನೆ. ಅವರು ಟಾಸ್ ವೇಳೆಯಲ್ಲಿ ನಗುತ್ತಾರೆ. ಅವರು ತುಂಬಾ ಸಂತೋಷವಾಗಿರುವಂತೆ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಅವರು ಸಂತೋಷವಾಗಿರುವುದಿಲ್ಲ. ನಾನು ಕೂಡ ಆ ಹಂತವನ್ನು ದಾಟಿದ್ದೇನೆ. ಹೀಗಾಗಿ, ಅದೆಲ್ಲವೂ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಈಗ ಹೇಳಬಲ್ಲೆ' ಎಂದು 43 ವರ್ಷದ ಮಾಜಿ ಬ್ಯಾಟರ್ ಪೀಟರ್ಸನ್ ತಿಳಿಸಿದ್ದಾರೆ.

'ನಾವು ಮೈದಾನದಲ್ಲಿ ಸಾಕಷ್ಟು ಅಬ್ಬರವನ್ನು ಕೇಳುತ್ತಿದ್ದೆವು ಮತ್ತು ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿಯನ್ನು ನೋಡಲು ಅವರು ಉತ್ಸುಕರಾಗಿದ್ದರು. ಮೈದಾನದಲ್ಲಿನ ಅಭಿಮಾನಿಗಳು ಹಾರ್ದಿಕ್ ಅವರನ್ನು ವಿರೋಧಿಸುತ್ತಿರುವುದು ಕೂಡ ಅವರಿಗೆ ನೋವುಂಟು ಮಾಡುತ್ತದೆ. ಏಕೆಂದರೆ ಅವರಿಗೂ ಭಾವನೆಗಳಿವೆ. ಅವರು ಟೀಂ ಇಂಡಿಯಾದ ಆಟಗಾರರಾಗಿದ್ದು, ಅಭಿಮಾನಿಗಳಿಂದ ಈ ರೀತಿಯ ವರ್ತನೆಗಳ್ನು ಅವರು ಬಯಸುವುದಿಲ್ಲ. ಆದ್ದರಿಂದ, ಇದು ಕೂಡ ಅವರ ಮೇಲೆ ಪರಿಣಾಮ ಬೀರುತ್ತದೆ. ಅದು ಕ್ರಿಕೆಟ್‌ನ ಮೇಲೆ ಪರಿಣಾಮ ಬೀರುತ್ತದೆ. ಸಿಎಸ್‌ಕೆ ಬ್ಯಾಟರ್‌ಗಳು ಎಂಐ ವೇಗಿಗಳನ್ನು ಗುರಿಯಾಗಿಸಿಕೊಂಡಾಗ ಪಾಂಡ್ಯ ತನ್ನ ಸ್ಪಿನ್ನರ್‌ಗಳನ್ನು ಏಕೆ ಬಳಸಲಿಲ್ಲ' ಎಂದು ಪ್ರಶ್ನಿಸಿದರು.

ಮುಂಬೈ ಇಂಡಿಯನ್ಸ್ ತಂಡವು 18 ರಂದು ಚಂಡೀಗಢದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

SCROLL FOR NEXT