ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ದೇವ್‌ಜಿತ್ ಸೈಕಿಯಾ ಅವರನ್ನು ಮಂಡಳಿಯ ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಜಯ್ ಶಾ ಬದಲಿಗೆ ಸೈಕಿಯಾ ಬಿಸಿಸಿಐ ವ್ಯವಹಾರಗಳನ್ನು ನಿರ್ವಹಿಸಲಿದ್ದಾರೆ. ಡಿಸೆಂಬರ್ 1ರಂದು ಜಯ್ ಶಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು ದೇವಜಿತ್ ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ, ಕಾಯಂ ಕಾರ್ಯದರ್ಶಿ ನೇಮಕವಾಗುವವರೆಗೆ ಹಾಲಿ ಕಾರ್ಯದರ್ಶಿ ಮಂಡಳಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು. ಇದು ತಾತ್ಕಾಲಿಕ ವ್ಯವಸ್ಥೆ.
ಅಸ್ಸಾಂ ಮೂಲದ ಸೈಕಿಯಾ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ. ಪ್ರಸ್ತುತ ಬಿಸಿಸಿಐನ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಸೈಕಿಯಾ ಮುಂದಿನ ವರ್ಷದ ಸೆಪ್ಟೆಂಬರ್‌ವರೆಗೆ ಈ ಹುದ್ದೆಯಲ್ಲಿ ಇರಲಿದ್ದು, ನಂತರ ಕಾರ್ಯದರ್ಶಿಯನ್ನು ಖಾಯಂ ಆಗಿ ನೇಮಿಸಲಾಗುವುದು.
ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ಡಿಸೆಂಬರ್ 1ರಂದು ಅಧಿಕಾರ ವಹಿಸಿಕೊಂಡರು. ಈ ವರ್ಷದ ಆಗಸ್ಟ್‌ನಲ್ಲಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾದರು. ಈ ಸ್ಥಾನವನ್ನು ಅಲಂಕರಿಸಿದ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ. ನವೆಂಬರ್ 2020ರಿಂದ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗ್ರೆಗ್ ಬಾರ್ಕ್ಲೇ ಅವರನ್ನು ಶಾ ಬದಲಾಯಿಸುತ್ತಿದ್ದಾರೆ.