ಇಸ್ಲಾಮಾಬಾದ್: ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ಹೌದು.. 32 ವರ್ಷದ ಮಹಮದ್ ಆಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಮತ್ತೆ ನಿವೃತ್ತರಾಗಿದ್ದಾರೆ. ಪಾಕಿಸ್ತಾನ ಪರ ಆಮೀರ್, 36 ಟೆಸ್ಟ್, 61 ಏಕದಿನ ಮತ್ತು 62 ಟಿ20ಐ ಆಡಿದ್ದಾರೆ.
ಈ ಪೈಕಿ ಒಟ್ಟು 271 ವಿಕೆಟ್ ಗಳನ್ನು ಕಬಳಿಸಿರುವ ಆಮೀರ್ 2017ರಲ್ಲಿ ಭಾರತದ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೇವಲ 16ರನ್ ನೀಡಿ 3 ವಿಕೆಟ್ ಪಡೆದಿದ್ದರು. ಇದು ಅವರ ಕ್ರಿಕೆಟ್ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನವಾಗಿದೆ.
ವಿದಾಯ ಮೊದಲಲ್ಲ
ಇನ್ನು ಮಹಮದ್ ಆಮೀರ್ ವಿದಾಯ ಹೇಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2009 ರಲ್ಲಿ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಅಮೀರ್ 2015 ರಲ್ಲಿ ವೃತ್ತಿಜೀವನ ಅಂತ್ಯಗೊಳಿಸಿದ್ದರು. ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿ ಬಿದ್ದಿದ್ದ ಪಾಕ್ ವೇಗಿಯನ್ನು 5 ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಹೀಗಾಗಿ 2010 ರಿಂದ 2015 ರವರೆಗೆ ಅವರು ಯಾವುದೇ ಪಂದ್ಯವಾಡಿರಲಿಲ್ಲ.
ಈ ನಿಷೇಧದ ನಡುವೆ ಕ್ರಿಕೆಟ್ ಆಮೀರ್ ತಮ್ಮ ಕ್ರಿಕೆಟ್ ಕರಿಯರ್ ಅನ್ನು ಅಂತ್ಯಗೊಳಿಸುವುದಾಗಿ ಅಮೀರ್ ಘೋಷಿಸಿದ್ದರು. ಆದರೆ 2016 ರಲ್ಲಿ ಮತ್ತೆ ಕಣಕ್ಕಿಳಿಯಲು ನಿರ್ಧರಿಸಿದರು. ಅದರಂತೆ ಪಾಕಿಸ್ತಾನ ತಂಡಕ್ಕೆ ಕಮ್ ಬ್ಯಾಕ್ ಮಾಡಿದ ಅಮೀರ್ 2017ರ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
2ನೇ ಬಾರಿ ನಿವೃತ್ತಿ ವಾಪಸ್
ಇದಾದ ಬಳಿಕ ಎಡಗೈ ವೇಗಿ ಆಮಿರ್ ಹಿಂತಿರುಗಿ ನೋಡಿರಲಿಲ್ಲ. ಸತತ ನಾಲ್ಕು ವರ್ಷಗಳ ಕಾಲ ಪಾಕ್ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡರು. ಆದರೆ 2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು. ಇನ್ಮುಂದೆ ಪಾಕಿಸ್ತಾನ ತಂಡಪರ ಪರ ಆಡುವುದಿಲ್ಲ ಎಂದು ಬಹಿರಂಗವಾಗಿಯೇ ತಿಳಿಸಿದ್ದರು. ಅಲ್ಲಿಗೆ ಮೊಹಮ್ಮದ್ ಅಮೀರ್ ಕೆರಿಯರ್ ಮುಗಿಯಿತು ಎಂದು ಹೇಳಲಾಗಿತ್ತು.
ಆದರೆ ಈ ವಿದಾಯದ ಎರಡು ವರ್ಷಗಳ ಬಳಿಕ ಮತ್ತೆ ಮೊಹಮ್ಮದ್ ಅಮೀರ್ ತಮ್ಮ ನಿರ್ಧಾರ ಬದಲಿಸಿದರು. ಅಲ್ಲದೆ ನಿವೃತ್ತಿ ಹಿಂಪಡೆದು 2024ರ ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡವನ್ನು ಪ್ರತಿನಿಧಿಸಿದರು. ಇದಾದ ಬಳಿಕ ಪಾಕಿಸ್ತಾನ್ ತಂಡದಿಂದ ಹೊರಬಿದ್ದ ಅಮೀರ್ ಇದೀಗ ಮತ್ತೊಮ್ಮೆ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ.