ಬ್ರಿಸ್ಬೇನ್: ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಅಸಲಿಯಾಟ ಶುರುವಾಗಿದ್ದು, ಮೊದಲ ದಿನ ಮಳೆಯಿಂದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದ್ದರೂ 2ನೇ ದಿನ ನೈಜ ಆಟ ಶುರುವಾಗಿದೆ.
ಹೌದು.. ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಆಡುತ್ತಿರುವ ಆಸ್ಟ್ರೇಲಿಯಾ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದೆ.
ಒಂದೆಡೆ ರನ್ ಗಳು ಹರಿಯುತ್ತಿದ್ದರೂ ಮತ್ತೊಂದೆಡೆ ಜಸ್ಪ್ರೀತ್ ಬುಮ್ರಾ ಒಂದರ ಹಿಂದೆ ಒಂದರಂತೆ ವಿಕೆಟ್ ಗಳನ್ನು ಕಬಳಿಸುತ್ತಾ ಸಾಗಿದರು. ಬುಮ್ರಾ ಹೊರತು ಪಡಿಸಿದರೆ ಒಂದು ಹಂತದಲ್ಲಿ ಉಳಿದ ಭಾರತೀಯ ಬೌಲರ್ ಗಳು ವಿಕೆಟ್ ಪಡೆಯಲು ಹರಸಾಹಸ ಪಟ್ಟರು.
31 ರನ್ಗೆ ಉಸ್ಮಾನ್ ಖ್ವಾಜಾ (21) ವಿಕೆಟ್ ಕಬಳಿಸುವಲ್ಲಿ ಬುಮ್ರಾ ಯಶಸ್ವಿಯಾದರು. ಈ ವೇಳೆ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದರು. ಇತ್ತ ಸತತ ಓವರ್ಗಳಿಂದ ಟೀಮ್ ಇಂಡಿಯಾ ಬೌಲರ್ಗಳು ಸಹ ಹೈರಾಣರಾದರು.
ಸಿರಾಜ್ ಮೈಂಡ್ ಗೇಮ್
ಈ ಹಂತದಲ್ಲಿ ಕೊಂಚ ಮೈಂಡ್ ಗೇಮ್ ಆಡಿದ ಸಿರಾಜ್ ಲಾಬುಶ್ಚೇನ್ ವಿಕೆಟ್ ಪಡೆಯಲು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬೇಲ್ಸ್ ಟ್ರಿಕ್ ಮೊರೆ ಹೋದರು. 33ನೇ ಓವರ್ ವೇಳೆ ಸಿರಾಜ್ ಸ್ಟಂಪ್ ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡಲು ಮುಂದಾದರು. ಇದನ್ನು ಗಮನಿಸಿದ ಮಾರ್ನಸ್ ಲಾಬುಶೇನ್ ತಮಗೆ ಬೇಲ್ಸ್ ಟ್ರಿಕ್ಸ್ ತಿಳಿದಿದ್ದರಿಂದ ಕೊಂಚ ಆತಂಕಕ್ಕೊಳಗಾಗಿ ಮತ್ತೆ ಬೇಲ್ಸ್ ಅನ್ನು ಮೊದಲಿದಂತೆ ಇಟ್ಟರು. ಆದರೆ ಇದನ್ನು ಸಿರಾಜ್ ಗಮನಿಸಿರಲಿಲ್ಲ. ಅಚ್ಚರಿ ಎಂದರೆ ಈ ಬೇಲ್ಸ್ ಬದಲಿಯಾಟ ಮುಂದಿನ ಓವರ್ ನಲ್ಲೇ ಲಾಬುಶೇನ್ ಔಟಾದರು. ಇದೀಗ ಲಾಬುಶೇನ್ ಹಾಗೂ ಸಿರಾಜ್ ನಡುವಣ ಬೇಲ್ಸ್ ಬದಲಾಟದ ವಿಡಿಯೋ ವೈರಲ್ ಆಗಿದೆ.
ಕ್ರಿಕೆಟ್ ನಲ್ಲಿ ಬೇಲ್ಸ್ ಬದಲಾವಣೆ ಆಟ
ಟೆಸ್ಟ್ ಕ್ರಿಕೆಟ್ನಲ್ಲಿ ಬೇಲ್ಸ್ ಟ್ರಿಕ್ ಪರಿಚಯಿಸಿದ್ದು ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್. ಎದುರಾಳಿ ತಂಡದ ವಿಕೆಟ್ ಬೀಳದಿದ್ದಾಗ ಬ್ರಾಡ್ ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡುತ್ತಿದ್ದರು. ವಿಶೇಷ ಎಂದರೆ ಇಂತಹದೊಂದು ಟ್ರಿಕ್ ಬಳಸಿದ ಬಳಿಕ ಬ್ರಾಡ್ ಹಲವು ಬಾರಿ ವಿಕೆಟ್ ಪಡೆದಿದ್ದರು. ಇದನ್ನೇ ಆಸ್ಟ್ರೇಲಿಯಾ ವಿರುದ್ಧ ಪ್ರಯೋಗಿಸಲು ಮೊಹಮ್ಮದ್ ಸಿರಾಜ್ ಮುಂದಾಗಿದ್ದರು. ಆದರೆ ಈ ಬೇಲ್ಸ್ ಟ್ರಿಕ್ ಬಗ್ಗೆ ಭಯ ಹೊಂದಿದ್ದ ಮಾರ್ನಸ್ ಲಾಬುಶೇನ್ ಕೂಡಲೇ ಮತ್ತೆ ಮೊದಲಿದ್ದಂತೆ ಬೇಲ್ಸ್ ಅನ್ನು ಇಡುವ ಮೂಲಕ ಗಮನ ಸೆಳೆದರು.