ಬ್ರಿಸ್ಬೇನ್: ಬ್ರಿಸ್ಬೇನ್ ನಲ್ಲಿ ನಡೆದ ಭಾರತ- ಆಸ್ಟ್ರೇಲಿಯಾ ಟೆಸ್ಟ್ ಸರಣಿಯ 3ನೇ ಪಂದ್ಯ ನಿರೀಕ್ಷೆಯಂತೆಯೇ ಡ್ರಾ ನಲ್ಲಿ ಅಂತ್ಯಗೊಂಡಿದೆ.
ಭಾರತ ಕೊನೆಯ ವಿಕೆಟ್ ಕಳೆದುಕೊಂಡು, ಅತಿಥೇಯರು 89ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡುವುದಕ್ಕೂ ಮೊದಲು ಭಾರತೀಯ ಬೌಲರ್ ಗಳು 7 ವಿಕೆಟ್ ಕಬಳಿಸಿದ್ದರು. ಪರಿಣಾಮ ಭಾರತಕ್ಕೆ ಪಂದ್ಯ ಗೆಲ್ಲಲು 275 ರನ್ ಗಳ ಟಾರ್ಗೆಟ್ ಇತ್ತು.
ಮಳೆಯ ಪರಿಣಾಮ ಪಂದ್ಯ ಕೊನೆಗೊಳ್ಳುವುದಕ್ಕೂ ಮೊದಲು ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ತಲಾ ನಾಲ್ಕು ರನ್ ಗಳಿಸಿದ್ದರು. ಯಾವುದೇ ವಿಕೆಟ್ ನಷ್ಟ ಇಲ್ಲದೇ ಭಾರತ 8 ರನ್ ಗಳಿಸಿದ್ದಾಗ ಸತತ ಮಳೆಯ ಕಾರಣ ಪಂದ್ಯ ಕೊನೆಗೊಳಿಸಲಾಗಿದೆ.
ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾ 1-1 ಅಂತರದಿಂದ ಸಮಬಲ ಸಾಧಿಸಿವೆ. ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಮುಂದಿನ ಟೆಸ್ಟ್ ಪಂದ್ಯ ಕುತೂಹಲಕಾರಿಯಾಗಿರಲಿದೆ.
ಬ್ರಿಸ್ಬೇನ್ ನಲ್ಲಿ ನಡೆದ ಪಂದ್ಯದ ಡ್ರಾನಲ್ಲಿ ಅಂತ್ಯಗೊಂಡಿರುವುದು ಭಾರತದ WTC Final ದೃಷ್ಟಿಯಿಂದ ಒತ್ತಡವನ್ನು ಹೆಚ್ಚು ಮಾಡಿದೆ. ಪಂದ್ಯ ಡ್ರಾ ಆಗಿರುವುದು ಸುಗಮ ಹಾದಿಯನ್ನು ದುರ್ಗಮಗೊಳಿಸಿದ್ದು ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ನಿರೀಕ್ಷೆಗಳು ಮಾತ್ರ ಜೀವಂತವಾಗಿದೆ.
WTC Final ಗೆ ಭಾರತ ನೇರವಾಗಿ ಅರ್ಹತೆ ಪಡೆಯಬೇಕಾದರೆ, BGT ಸರಣಿಯನ್ನು 3-1 ಅಂತರದಿಂದ ಗೆಲ್ಲಬೇಕಾದ ಅನಿವಾರ್ಯತೆ ಭಾರತಕ್ಕೆ ಇದೆ. ಅಂದರೆ ಉಳಿದ ಎರಡೂ ಪಂದ್ಯಗಳನ್ನು ಗೆದ್ದು, ಮತ್ತೊದೆಂಡೆ, ಪಾಕ್ ವಿರುದ್ಧದ ಟೆಸ್ಟ್ ನ ಎರಡೂ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಒಂದನ್ನಾದರೂ ಗೆದ್ದರೆ ಮಾತ್ರ ಭಾರತ ನೇರವಾಗಿ ಅರ್ಹತೆ ಪಡೆಯಲಿದ್ದು, ಹೆಚ್ಚಿನ ಒತ್ತಡ ನಿರ್ಮಾಣವಾಗಿದೆ.
ಭಾರತವು 2-1 ಅಂತರದಿಂದ ಸರಣಿಯನ್ನು ಗೆದ್ದರೆ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯನ್ನು 1-1 ಸಮಬಲಗೊಳಿಸುವುದು ಭಾರತಕ್ಕೆ ಅಗತ್ಯವಿದೆ.
ಅಥವಾ ಬಾರ್ಡರ್-ಗವಾಸ್ಕರ್ ಟ್ರೋಫಿ 2-2 ಅಂತರದಲ್ಲಿ ಕೊನೆಗೊಂಡರೆ, ತವರಿನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 1-0 ಅಥವಾ 2-0 ಅಂತರದಿಂದ ಶ್ರೀಲಂಕಾ ಸೋಲಿಸುವುದು ಅಗತ್ಯವಿದೆ.