ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿದೆ.
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಇಂದು ಆರಂಭಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭರ್ಜರಿ ಬ್ಯಾಟಿಂಗ್ ಮೂಲಕ ದಿನದಾಟದ ಅಂತ್ಯಕ್ಕೆ 311 ರನ್ ಕಲೆ ಹಾಕಿದೆ. ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಉದಯೋನ್ಮುಖ ಆಟಗಾರ ಸ್ಯಾಮ್ ಕೋನ್ಸ್ತಾಸ್ 60 ರನ್ ಗಳಿಸಿದರೆ, ಉಸ್ಮಾನ್ ಖವಾಜ 57 ರನ್ ಗಳಿಸಿದರು.
ಬಳಿಕ ಕ್ರೀಸ್ ಗೆ ಬಂದ ಮಾರ್ನಸ್ ಲಾಬುಸ್ಚಾಗ್ 72 ರನ್ ಮತ್ತು ಅಲೆಕ್ಸ್ ಕರೆ 31 ರನ್ ಗಳಿಸಿದರು. ದಿನದಾಟದ ಅಂತ್ಯಕ್ಕೆ 68ರನ್ ಗಳಿಸಿರುವ ಸ್ಟೀವೆನ್ ಸ್ಮಿತ್ ಮತ್ತು 8 ರನ್ ಗಳಿಸಿರುವ ನಾಯಕ ಪ್ಯಾಟ್ ಕಮಿನ್ಸ್ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನ್ನು ಭಾರತ ತಂಡದ ಪರ ಜಸ್ ಪ್ರೀತ್ ಬುಮ್ರಾ ಮತ್ತೆ ತಮ್ಮ ಕರಾರುವಕ್ಕಾದ ಬೌಲಿಂಗ್ ಮೂಲಕ 3 ವಿಕೆಟ್ ಪಡೆದರೆ, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ಟ್ರಾವಿಸ್ ಹೆಡ್ ಶೂನ್ಯ
ಇನ್ನು ಇಡೀ ಸರಣಿಯಲ್ಲಿ ಭಾರತೀಯ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ್ದ ಟ್ರಾವಿಸ್ ಹೆಡ್ ಮೊದಲ ಇನ್ನಿಂಗ್ಸ್ ನಲ್ಲಿ ಸಂಪೂರ್ಣ ವಿಫಲರಾದರು. ಕೇವಲ 7 ಎಸೆತ ಎದುರಿಸಿದ ಹೆಡ್ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು.