ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಕಳಪೆ ಬ್ಯಾಟಿಂಗ್ಗೆ ಬೆಲೆ ತೆತ್ತಿದೆ. ಆಸ್ಟ್ರೇಲಿಯಾ ವಿರುದ್ಧ 184 ರನ್ಗಳ ಹೀನಾಯ ಸೋಲು ಕಂಡ ಭಾರತ ಸರಣಿಯಲ್ಲಿ 2-1 ಹಿನ್ನಡೆ ಅನುಭವಿಸಿದೆ. ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸುವಲ್ಲಿಯೂ ವಿಫಲವಾದ ರೋಹಿತ್ ಪಡೆ ಈಗ ಸರಣಿಯಲ್ಲಿ 2-1 ಅಂತರದಲ್ಲಿ ಹಿನ್ನಡೆ ಸಾಧಿಸಿದೆ.
ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 340 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. ರೋಹಿತ್ ಶರ್ಮಾ (9), ವಿರಾಟ್ ಕೊಹ್ಲಿ (5), ಕೆಎಲ್ ರಾಹುಲ್ (0) ಅವರನ್ನು ಬೇಗನೇ ಕಳೆದುಕೊಂಡಿತು. ಕೇವಲ 33 ರನ್ ಗಳಿಸುವಷ್ಟರಲ್ಲಿ ಟಾಪ್-3 ಬ್ಯಾಟರ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ವ್ಯರ್ಥವಾದ ಜೈಸ್ವಾಲ್ ಏಕಾಂಗಿ ಹೋರಾಟ
ಇನ್ನು ಭಾರತದ 2ನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ ನಡೆಸಿದರು. ತಂಡದ ಘಟಾನುಘಟಿ ಬ್ಯಾಟರ್ ಗಳಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಿಂದಲೂ ಅವರಿಗೆ ನೆರವು ಸಿಗಲಿಲ್ಲ. ರಿಷಬ್ ಪಂತ್ ಮತ್ತೆ ಗ್ಲಾಮರ್ ಶಾಟ್ ಗೆ ಬಲಿಯಾದರು. ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರು ಮತ್ತೊಂದು ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಜೈಸ್ವಾಲ್ 208 ಎಸೆತಗಳಲ್ಲಿ 8 ಬೌಂಡರಿ ಸಹಿತ 84 ರನ್ ಗಳಿಸಿ ತಂಡಕ್ಕೆ ಆಸೆರೆಯಾಗಿದ್ದರು. ಎರಡನೇ ಇನ್ನಿಂಗ್ಸ್ನಲ್ಲೂ ಅರ್ಧಶತಕ ಸಿಡಿಸಿ ಗೆಲುವು ಅಥವಾ ಡ್ರಾ ಮಾಡುವ ಭರವಸೆ ಮೂಡಿಸಿದ್ದರು.
ವಿವಾದಾತ್ಮಕ ತೀರ್ಪಿಗೆ ಬಲಿ
ಸತತ ವಿಕೆಟ್ ಪತನವಾಗುತ್ತಿದ್ದರೂ ಮತ್ತೊಂದು ಎಂಡ್ನಲ್ಲಿ ಬಂಡೆಗಲ್ಲಿನಂತೆ ನಿಂತು ಹೋರಾಡಿದ ಜೈಸ್ವಾಲ್ ಸತತ 2ನೇ ಅರ್ಧಶತಕ ಸಿಡಿಸಿದರು. ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಲು ದಿಟ್ಟ ಹೋರಾಟ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್ ಪ್ಯಾಟ್ ಕಮಿನ್ಸ್ ಓವರ್ ನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಪ್ಯಾಟ್ ಕಮಿನ್ಸ್ ಎಸೆದ 71ನೇ ಓವರ್ನ 5ನೇ ಎಸೆತದಲ್ಲಿ ಪುಲ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ತಪ್ಪಿಸಿ ವಿಕೆಟ್ ಕೀಪರ್ ಕೈ ಸೇರಿತು. ಈ ವೇಳೆ ಆಸೀಸ್ ಆಟಗಾರರು, ಅಂಪೈರ್ಗೆ ಬಲವಾದ ಮನವಿ ಸಲ್ಲಿಸಿದರು. ಆದರೆ ಮೈದಾನದ ಅಂಪೈರ್ ನಾಟ್ಔಟ್ ಎಂದು ತೀರ್ಪು ಕೊಟ್ಟರು. ಹೀಗಾಗಿ, ತಂಡದ ಆಟಗಾರರೊಂದಿಗೆ ಚರ್ಚಿಸಿದ ಕಮಿನ್ಸ್, ಆನ್ಫೀಲ್ಡ್ ಅಂಪೈರ್ ತೀರ್ಪಿನ ವಿರುದ್ಧ ಮೂರನೇ ಅಂಪೈರ್ಗೆ ಮೇಲ್ಮನವಿ ಸಲ್ಲಿಸಿದರು. ಆಗ 3ನೇ ಅಂಪೈರ್ ಔಟ್ ತೀರ್ಪು ನೀಡಿದರು.
ಗ್ಲೌಸ್ ಅಥವಾ ಬ್ಯಾಟ್ಗೆ ಚೆಂಡು ತಾಗಿಲ್ಲ..
ಮೂರನೇ ಅಂಪೈರ್ ಆಗಿದ್ದ ಬಾಂಗ್ಲಾದೇಶದ ಶರ್ಫುದ್ದೌಲಾ, ಅಲ್ಟ್ರಾ ಎಡ್ಜ್ ಪರಿಶೀಲನೆ ನಡೆಸಿದರು. ಚೆಂಡು ಬ್ಯಾಟ್ ಪಕ್ಕದಲ್ಲೇ ಹಾದು ಹೋಗುತ್ತದಾದರೂ ಎಲ್ಲೂ ತಾಗದೇ ಇರುವುದು ಕಂಡು ಬಂತು. ಬ್ಯಾಟ್ ಅಥವಾ ಗ್ಲೌಸ್ಗೆ ಚೆಂಡು ಟಚ್ ಆಗಲಿಲ್ಲ ಎನ್ನುವುದು ಅಲ್ಟ್ರಾ ಎಡ್ಜ್ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಚೆಂಡು ಹಾದು ಹೋದಾಗ ಸ್ನೀಕೊ ಮೀಟರ್ನಲ್ಲಿ ತಾಗಿರುವ ಸ್ಟ್ರೈಕ್ ಕಾಣಲೇ ಇಲ್ಲ. ಇದನ್ನು ಹಲವು ಬಾರಿ ಪರಿಶೀಲನೆ ನಡೆಸಿದರೂ ಒಂದೇ ರೀತಿ ಕಾಣುತ್ತಿತ್ತು. ಅದಾಗಿಯೂ ಚೆಂಡು ಬ್ಯಾಟ್ಗೆ ಸವರಿ ದಿಕ್ಕು ಬದಲಿಸಿರಬಹುದು ಎಂದು ಅಂದಾಜಿಸಿ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಮೈದಾನದಲ್ಲೇ ಇದ್ದ ಜೈಸ್ವಾಲ್ ಅಚ್ಚರಿ ಜೊತೆ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಭಾರತೀಯ ಆಟಗಾರರು ಅಚ್ಚರಿ ವ್ಯಕ್ತಪಡಿಸಿದರು. ಇದರೊಂದಿಗೆ ಅವರ ಏಕಾಂಗಿ ಹೋರಾಟ ಅಲ್ಲಿಗೆ ಅಂತ್ಯಗೊಂಡಿತು.
ವಿವಾದಾತ್ಮಕ ತೀರ್ಪಿಗೆ ವ್ಯಾಪಕ ಆಕ್ರೋಶ
3ನೇ ಅಂಪೈರ್ ತೀರ್ಪು ದೊಡ್ಡ ಪರದೆ ಮೇಲೆ ಪ್ರದರ್ಶನವಾಗುತ್ತಲೇ ಭಾರತ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಂಪೈರ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ಇದು ಒಪ್ಪುವಂತಹ ತೀರ್ಪು ಅಲ್ಲ. ಸ್ಪಷ್ಟವಾಗಿ ಚೆಂಡು ತಾಗದೇ ಇರುವುದು ಕಂಡರೂ ಔಟ್ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಗಂಗೂಲಿ ಮಾತ್ರವಲ್ಲ, ಬಹುತೇಕ ಮಾಜಿ ಕ್ರಿಕೆಟಿಗರು ಮೂರನೇ ಅಂಪೈರ್ ನೀಡಿರುವ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೆಂಡು ದಿಕ್ಕು ಬದಲಿಸಿದ ಮಾತ್ರ ಔಟ್ ಎಂದು ತೀರ್ಪು ನೀಡಲು ಹೇಗೆ ಸಾಧ್ಯ? ಚೆಂಡು ಸ್ವಿಂಗ್ ಆಗಿರಬಹುದು ಎಂದು ಅನೇಕರು ಪ್ರಶ್ನಿಸಿದ್ದಾರೆ.