ಕ್ರಿಕೆಟ್

2ನೇ ಟೆಸ್ಟ್: ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ಆಫ್ರಿಕಾ ತತ್ತರ: 176 ರನ್ ಗೆ ಆಲೌಟ್, ಭಾರತಕ್ಕೆ ಗೆಲ್ಲಲು 79 ರನ್ ಗುರಿ

Vishwanath S

ಕೇಪ್ ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್‌ನ ಎರಡನೇ ದಿನದಂದು, ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ ಮಾರಕರಾದರು. ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 176 ರನ್ ಗಳಿಸಲಷ್ಟೇ ಶಕ್ತವಾಯಿತು.

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 55 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 153 ರನ್ ಗಳಿಗೆ ಆಲೌಟ್ ಆಗಿದ್ದು, 98 ರನ್‌ಗಳ ಮುನ್ನಡೆ ಸಾಧಿಸಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ 176 ರನ್ ಗಳಿಗೆ ಸರ್ವಪತನ ಕಂಡಿದ್ದು ಭಾರತಕ್ಕೆ ಗೆಲುವಿಗೆ 79 ರನ್ ಗುರಿ ನೀಡಿದೆ.

ಭಾರತದ ಪರ ಜಸ್ಪ್ರೀತ್ ಬುಮ್ರಾ 6 ವಿಕೆಟ್, ಮುಖೇಶ್ ಕುಮಾರ್ 2 ಮತ್ತು ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ 1-1 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ಪರ ಏಡನ್ ಮಾರ್ಕ್ರಾಮ್ 106 ರನ್‌ಗಳ ಇನಿಂಗ್ಸ್‌ ಆಡಿದರು. ಇವರ ಹೊರತಾಗಿ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮುಟ್ಟಲು ಸಾಧ್ಯವಾಯಿತು. ಡೀನ್ ಎಲ್ಗರ್ 12 ರನ್, ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ಮಾರ್ಕೊ ಯಾನ್ಸನ್ ತಲಾ 11 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸಿತ್ತು.

ದಿನದ ಮೊದಲ ಓವರ್‌ನಲ್ಲಿ ಕೇವಲ 11 ರನ್ ಗಳಿಸಿದ ಡೇವಿಡ್ ಬೆಡಿಂಗ್‌ಹ್ಯಾಮ್‌ಗೆ ಜಸ್ಪ್ರೀತ್ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ದಿನದ ಎರಡನೇ ವಿಕೆಟ್ ಕೂಡ ಬುಮ್ರಾ ಖಾತೆಗೆ ಸೇರಿತು. 22ನೇ ಓವರ್‌ನ ಮೊದಲ ಎಸೆತದಲ್ಲಿ ಮೊಹಮ್ಮದ್ ಸಿರಾಜ್‌ಗೆ ಕ್ಯಾಚ್ ನೀಡಿ ವೆರೆನ್ ಔಟಾದರು. ಮಾರ್ಕೊ ಜಾನ್ಸನ್ ಕೂಡ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. 11 ರನ್ ಗಳಿಸಿದ್ದಾಗ ಬುಮ್ರಾಗೆ ಕ್ಯಾಚ್ ನೀಡಿದರು. ಆ ವೇಳೆಗೆ ಭಾರತದ ಸ್ಥಾನ ಸಾಕಷ್ಟು ಗಟ್ಟಿಯಾಗಿತ್ತು. ಕೇಶವ್ ಮಹಾರಾಜ್ ಐಡೆನ್ ಮಾರ್ಕ್ರಾಮ್ ಅವರನ್ನು ಬೆಂಬಲಿಸಲು ಪ್ರಯತ್ನಿಸಿದರು ಆದರೆ 3 ರನ್ ಪೇರಿಸಿದ ನಂತರ, ಅವರು ಬುಮ್ರಾಗೆ ಬಲಿಯಾದರು.

ಶತಕ ಸಿಡಿಸಿದ ಏಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿದ ಮೊಹಮ್ಮದ್ ಸಿರಾಜ್ ಭಾರತಕ್ಕೆ ದೊಡ್ಡ ಯಶಸ್ಸನ್ನು ನೀಡಿದರು. ತಂಡದ ಸ್ಕೋರ್ 162 ಆಗಿದ್ದಾಗ ಸಿರಾಜ್ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾಗೆ ಕ್ಯಾಚಿತ್ತು ಮಾರ್ಕ್ರಾಮ್ ಔಟಾದರು. ಅದೇ ಸ್ಕೋರ್‌ನಲ್ಲಿ ಕಗಿಸೊ ರಬಾಡ ಕೂಡ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ರೋಹಿತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಲುಂಗಿ ಎನ್‌ಗಿಡಿ ಮತ್ತು ನಾಂದ್ರೆ ಬರ್ಗರ್ ಪ್ರಯತ್ನಿಸಿದರು ಆದರೆ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಲುಂಗಿ ಎನ್‌ಗಿಡಿಯನ್ನು ಔಟ್ ಮಾಡುವ ಮೂಲಕ ಬುಮ್ರಾ ಭಾರತಕ್ಕೆ ಕೊನೆಯ ಯಶಸ್ಸನ್ನು ನೀಡಿದರು.

SCROLL FOR NEXT