ಬಾರ್ಬಡೋಸ್: ಬರೊಬ್ಬರಿ 13 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ರ ''ನಿರುದ್ಯೋಗಿ'' ಹೇಳಿಕೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಟಿ20 ವಿಶ್ವಕಪ್ ಟೂರ್ನಿಯ ಮುಕ್ತಾಯದೊಂದಿಗೆ ರಾಹುಲ್ ದ್ರಾವಿಡ್(Rahul Dravid) ಅವರ ಕೋಚಿಂಗ್ ಜವಾಬ್ದಾರಿ ಕೂಡ ಮುಕ್ತಾಯಗೊಂಡಿದ್ದು, ಫೈನಲ್ ಪಂದ್ಯದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ರಾಹುಲ್ ದ್ರಾವಿಡ್ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಕೋಚ್ ಬಳಿಕ ಮುಂದಿನ ನಡೆ ಏನೆಂದು ಕೇಳಿದ ಪ್ರಶ್ನೆಗೆ ಹಾಸ್ಯಾಸ್ಪದವಾಗಿ ಉತ್ತರಿಸಿದ ದ್ರಾವಿಡ್, ''ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಎಲ್ಲಾದರೂ ಕೆಲಸ ಇದ್ದರೆ ಹೇಳಿ ಎಂದರು. ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಹೊಸ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದೆ.
ದ್ರಾವಿಡ್ ಮುಂದಿನ ನಡೆ ಏನು?
ಕಳೆದ ವರ್ಷವೇ ದ್ರಾವಿಡ್ ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಮತ್ತೊಮ್ಮೆ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದು ಹೇಳಿದ್ದರು. ದ್ರಾವಿಡ್ ಅವರ ಇಬ್ಬರು ಮಕ್ಕಳು ಕೂಡ ಕ್ರಿಕೆಟಿಗರಾಗಿರುವ ಕಾರಣ ಇವರ ಕ್ರಿಕೆಟ್ ಭವಿಷ್ಯ ರೂಪಿಸುವಲ್ಲಿ ದ್ರಾವಿಡ್ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬಹುದು ಎನ್ನಲಾಗಿದೆ.
ರವಿಶಾಸ್ತ್ರಿ ಬಳಿಕ ಕೋಚ್ ಹುದ್ದೆ ನಿಭಾಯಿಸಿದ್ದ ಜಾಮಿ
ಇನ್ನು 2021ರಲ್ಲಿ ಟಿ20 ವಿಶ್ವಕಪ್ ಬಳಿಕ, ಕೋಚ್ ಆಗಿದ್ದ ರವಿಶಾಸ್ತ್ರಿ ನಿರ್ಗಮನದಿಂದ ತೆರವಾದ ಸ್ಥಾನವನ್ನು ದ್ರಾವಿಡ್ ವಹಿಸಿದ್ದರು. ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಅಂತ್ಯಗೊಂಡಿತ್ತು. ಆ ಬಳಿಕ, ದ್ರಾವಿಡ್ಗೆ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಕೂಡ ಇರಲಿಲ್ಲ. ಆದರೂ ಕೂಡ ದ್ರಾವಿಡ್ ಮತ್ತು ಇತರ ತರಬೇತಿ ಸಿಬ್ಬಂದಿಯನ್ನು ಟಿ20 ವಿಶ್ವಕಪ್ ತನಕ ಮುಂದುವರಿಸಲಾಗಿತ್ತು.
ತಮ್ಮ ಕನಸನ್ನು ಕಿರಿಯರಿಂದ ನನಸು ಮಾಡಿಸಿಕೊಂಡ ''ದಿ ವಾಲ್''
1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್ ದ್ರಾವಿಡ್ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್ ಅನ್ನು ತರಬೇತುದಾರನಾಗಿ ದ್ರಾವಿಡ್ ಗಳಿಸಿಕೊಂಡಿದ್ದಾರೆ.
2007ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರಿ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗದೇ ಅವಮಾನ ಎದುರಿಸಿತ್ತು.
ಅಂದು ಅವಮಾನ ಎದುರಿಸಿದ ವಿಂಡೀಸ್ ನೆಲದಲ್ಲೇ ಇದೀಗ ದ್ರಾವಿಡ್ ತರಬೇತುದಾರನಾಗಿ ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದಾರೆ.