ನವದೆಹಲಿ: ಶುಭ್ಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯ ಶನಿವಾರ ನಡೆದಿದ್ದು, ಭಾರತ 13 ರನ್‌ಗಳಿಂದ ಸೋಲನುಭವಿಸಿತ್ತು. ಭಾರತ ತಂಡದ ಈ ಸೋಲಿನ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಸಿಸಿಐ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಿಸಿಸಿಐ ವಿರುದ್ಧ ಕಿಡಿಕಾರಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ ಮಾಡಿರುವ ಶಶಿ ತರೂರ್, 'ಭಾರತದ T20 ವಿಶ್ವಕಪ್ 2024 ಗೆಲುವಿಗಾಗಿ ಮುಂಬೈನಲ್ಲಿ ಸಂಭ್ರಮಾಚರಣೆಯ ಪ್ರತಿಧ್ವನಿ ಇನ್ನೂ ಕಡಿಮೆಯಾಗಿಲ್ಲ. ಆದರೆ ಇಂದು ಹರಾರೆಯಲ್ಲಿ ಸಣ್ಣ ಜಿಂಬಾಬ್ವೆ ತಂಡವು ನಮ್ಮನ್ನು ಸೋಲಿಸಿದೆ. ಜಿಂಬಾಬ್ವೆ ತಂಡವನ್ನು ಬಿಸಿಸಿಐ ಲಘುವಾಗಿ ಪರಿಗಣಿಸಿತ್ತು. ಹೀಗಾಗಿ ಹರಾರೆಗೆ ಬಲಿಷ್ಠ ತಂಡವನ್ನು ಕಳುಹಿಸಿಲ್ಲ. ಇದು ಬಿಸಿಸಿಐ 'ಅಹಂಕಾರ' ತೋರಿಸುತ್ತದೆ ಎಂದು ಬರೆದಿದ್ದರು.
ಪ್ರಸ್ತುತ T20 ಸರಣಿಗೆ ಅಗ್ರ ಆಟಗಾರರಿಲ್ಲದ ತಂಡವನ್ನು ಕಳುಹಿಸಿದ್ದಕ್ಕಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಅಹಂಕಾರಿ ಎಂದು ಕರೆದಿದ್ದರು. ಇನ್ನು ಶಶಿ ತರೂರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಮುಖ್ಯ ತಂಡ ಇಂದು ಆಡಲಿಲ್ಲ - ನಾವು ಸೋತಿದ್ದೇವೆ... ಆದರೆ ಬಿಜೆಪಿ ಮತ್ತು ಮೋದಿಯ ಮೇಲಿನ ದ್ವೇಷದಲ್ಲಿ ಕಾಂಗ್ರೆಸ್ ಭಾರತದ ಸೋಲನ್ನು ಸಂಭ್ರಮಿಸುತ್ತಿದೆ ನೋಡಿ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಕಾಂಗ್ರೆಸ್ ನಾಯಕನನ್ನು ಟೀಕಿಸಿದ್ದಾರೆ.
ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಕಡಿಮೆ ರನ್ ಗಳಿಸಿ ಸೋಲು ಕಂಡಿದ್ದಾರೆ. 116 ರನ್‌ಗಳ ಗುರಿ ಬೆನ್ನತ್ತಿದ ಭಾರತ ಒಟ್ಟು 102 ರನ್‌ಗಳಿಗೆ ಕುಸಿಯಿತು. ಶುಭ್‌ಮನ್ ಗಿಲ್ 31 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ತೆಂಡೈ ಚತ್ರಾ ಮತ್ತು ಸಿಕಂದರ್ ರಝಾ ತಲಾ ಮೂರು ವಿಕೆಟ್ ಪಡೆದು ಭಾರತ ತಂಡದ ವಿರುದ್ಧ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಜುಲೈ 7ರಂದು ಅಂದರೆ ಇಂದು ಸರಣಿಯ ಎರಡನೇ ಟಿ20 ಪಂದ್ಯವನ್ನು ತಂಡವು ಆಡಿದ್ದು 100 ರನ್ ಗಳ ಗೆಲುವಿನೊಂದಿಗೆ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ.