ಮುಂಬೈ: ಟಿ20 ವಿಶ್ವಕಪ್ ಟೂರ್ನಿ ಬಳಿಕ ಟಿ20 ಕ್ರಿಕೆಟ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ನೂತನ ನಾಯಕರು ಆಯ್ಕೆಯಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಶ್ರೀಲಂಕಾ ಸರಣಿಗೂ ರೋಹಿತ್ ಶರ್ಮಾ ಅಲಭ್ಯರಾಗುತ್ತಿರುವ ಹಿನ್ನಲೆಯಲ್ಲಿ ಈ ಸರಣಿಗೆ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈಗಾಗಲೇ ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದು, ಶ್ರೀಲಂಕಾ ಪ್ರವಾಸದಿಂದಲೇ ಗಂಭೀರ್ ತಮ್ಮ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಶ್ರೀಲಂಕಾ ಪ್ರವಾಸದಲ್ಲಿ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯಾ ಮತ್ತು ಏಕದಿನ ಸರಣಿಗೆ ಕೆಎಲ್ ರಾಹುಲ್ ನಾಯಕರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಝೀರೋ ಟು ಹೀರೋ ಆಗಿದ್ದ ಪಾಂಡ್ಯ
ಇನ್ನು ಐಪಿಎಲ್ ಸರಣಿಯಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅಕ್ಷರಶಃ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ವಿರೋಧ ಎದುರಿಸಿದ್ದರು. ಆ ಟೂರ್ನಿ ಮುಂಬೈ ಪ್ರದರ್ಶನ ಕೂಡ ಅಷ್ಟೇನೂ ಉತ್ತಮವಾಗಿರದೇ ತಂಡದ ನಿರೀಕ್ಷೆಗಿಂತ ಮೊದಲೇ ಟೂರ್ನಿಯಿಂದ ಹೊರಬಿತ್ತು.
ಹಾರ್ದಿಕ್ ಪಾಂಡ್ಯಾ ಪ್ರತೀಬಾರಿ ಮೈದಾನಕ್ಕೆ ಇಳಿದರೂ ಪ್ರೇಕ್ಷಕರ ವಿರೋಧ, ಟೀಕೆ ಎದುರಿಸುತ್ತಿದ್ದರು. ಇದರ ಬೆನ್ನಲ್ಲೇ ಪ್ರಕಟಗೊಂಡ ಟಿ20 ವಿಶ್ವಕಪ್ ತಂಡದಲ್ಲೂ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದು ಪ್ರೇಕ್ಷಕ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು.
ಓರ್ವ ಆಟಗಾರನಾಗಿ, ನಾಯಕನಾಗಿಯೂ ವಿಫಲರಾಗಿದ್ದ ಹಾರ್ದಿಕ್ ಪಾಂಡ್ಯಗೆ ಸ್ಥಾನ ನೀಡಿದ್ದ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಆದರೆ ಇಷ್ಟೆಲ್ಲಾ ವಿವಾದಗಳಿಂದಲೇ ಟಿ20 ವಿಶ್ವಕಪ್ ಟೂರ್ನಿ ಆರಂಭಿಸಿದ್ದ ಹಾರ್ದಿಕ್ ಪಾಂಡ್ಯ ಫೈನಲ್ ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ತಂಡದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಮಾತ್ರವಲ್ಲದೇ ತಾವು ಝೀರೋ ಅಲ್ಲ ಎಂಬುದನ್ನು ಸಾಬೀತು ಪಡಿಸಿದ್ದರು.
ಐಪಿಎಲ್ ಟೂರ್ನಿ ವೇಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಯಾವ ಪ್ರೇಕ್ಷಕರು ಹಾರ್ದಿಕ್ ರನ್ನು ಬೂಯಿಂಗ್ ಮಾಡಿದ್ದರೋ ವಿಶ್ವಕಪ್ ಜಯದ ಬಳಿಕ ಮುಂಬೈನ ಅದೇ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯಾ ಆದೇ ಪ್ರೇಕ್ಷಕರಿಂದ ಹಾರ್ದಿಕ್.. ಹಾರ್ದಿಕ್ ಎಂಬ ಘೋಷಣೆ ಕೇಳಿದ್ದರು.
ಆ ಮೂಲಕ ಹಾರ್ದಿಕ್ ಪ್ರೇಕ್ಷಕರ ಹೀರೋ ಆಗಿದ್ದರು. ಇದೀಗ ಅದೇ ಹಾರ್ದಿಕ್ ಪಾಂಡ್ಯಾ ನೇತೃತ್ವದಲ್ಲಿ ಭಾರತ ತಂಡ ಶ್ರೀಲಂಕಾದಲ್ಲಿ ಟಿ20 ಸರಣಿಯನ್ನಾಡಲು ಸಜ್ಜಾಗಿದೆ.