ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಆಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕಳೆದ ಬಾರಿ ಏಷ್ಯಾ ಕಪ್ ನಡೆದಂತೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯಲ್ಲಿ ಆಡಲು ಬಿಸಿಸಿಐ ಬಯಸಿದೆ. ಈ ಮಾದರಿಯಲ್ಲಿ ಎಲ್ಲಾ ಪಂದ್ಯಗಳನ್ನು ಭಾರತ ಶ್ರೀಲಂಕಾದಲ್ಲಿ ಆಡಿತ್ತು. ಈ ಕುರಿತು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್ ನಲ್ಲಿ ಆಯೋಜಿಸುವ ಕುರಿತು ಪಾಕಿಸ್ತಾನ ಐಸಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಪಾಕಿಸ್ತಾನದ ಪ್ರಸ್ತಾವನೆಯನ್ನು ನಿರಾಕರಿಸಿರುವ ಬಿಸಿಸಿಐ, ಭಾರತದ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈಯಲ್ಲಿ ಆಯೋಜಿಸುವಂತೆ ಕೊಲಂಬೊದಲ್ಲಿ ಮುಂದಿನ ವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ಮನವಿ ಮಾಡಲಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಆಯೋಜನೆಯಾಗಲಿವೆ. ಕೆಲವು ವಾರಗಳ ಹಿಂದೆ ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಭದ್ರತೆ ದೃಷ್ಟಿಯಿಂದ ಭಾರತದ ಪಂದ್ಯಗಳನ್ನು ಲಾಹೋರ್ ನಲ್ಲಿ ನಿಗದಿಪಡಿಸಿತ್ತು. ಆದರೆ, ಬಿಸಿಸಿಐ ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸುವ ಮನಸ್ಥಿತಿ ಹೊಂದಿಲ್ಲ. 2008ರಿಂದಲೂ ಭಾರತ ಪಾಕಿಸ್ತಾನಕ್ಕೆ ತೆರಳಿಲ್ಲ.
ಪಾಕಿಸ್ತಾನಕ್ಕೆ 2012ರಲ್ಲಿ ದ್ವಿಪಕ್ಷೀಯ ಸರಣಿ, 2016ರಲ್ಲಿ ಐಸಿಸಿ ಟೂರ್ನಿ ಹಾಗೂ ಕಳೆದ ವರ್ಷ ವಿಶ್ವಕಪ್ ಗಾಗಿ ಭಾರತಕ್ಕೆ ಆಗಮಿಸಿದ್ದರೂ ಭಾರತ ಮಾತ್ರ ಪಾಕಿಸ್ತಾನಕ್ಕೆ ತೆರಳಿ ಆಡಿಲ್ಲ. ಕಳೆದ ವರ್ಷ, ಏಷ್ಯಾ ಕಪ್ ನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿತ್ತು. ಪಾಕಿಸ್ತಾನ ತವರಿನಲ್ಲಿ ಕೆಲವು ಪಂದ್ಯಗಳನ್ನು ಆಯೋಜಿಸಿತ್ತು, ಆದರೆ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು.