ಪಳ್ಳೆಕೆಲೆ: ಶ್ರೀಲಂಕಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಲಂಕನ್ನರಿಗೆ ಗೆಲ್ಲಲು 138ರನ್ ಗಳ ಸಾಧಾರಣ ಗುರಿ ನೀಡಿದೆ.
ಪಳ್ಳೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗು ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳನ್ನು ಗಳಿಸಿದೆ.
ಆರಂಭದಿಂದಲೂ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯ ಎದುರು ಪಾರಮ್ಯ ಮೆರೆ ಲಂಕಾ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಪಡೆಯುವ ಮೂಲಕ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 10 ರನ್ ಗಳಿಸಿ ಔಟಾದರೆ, ಸಂಜು ಸ್ಯಾಮ್ಸನ್ ಮತ್ತೆ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ರಿಂಕು ಸಿಂಗ್ ರನ್ ಗಳಿಕೆ ಕೇವಲ 1 ರನ್ ಗೇ ಸೀಮಿತವಾಯಿತು. ನಾಯಕ ಸೂರ್ಯ ಕುಮಾರ್ ಯಾದವ್ ಕೂಡ ರನ್ ಗಳಿಸಿ ಫರ್ನಾಂಡೋ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದಾಗಿ ಭಾರತ ಅಲ್ಪ ಮೊತ್ತಕ್ಕೆ ಕುಸಿಯು ಭೀತಿ ಇತ್ತು. ಆದರೆ ಶುಭ್ ಮನ್ ಗಿಲ್ (39 ರನ್), ಕೆಳ ಕ್ರಮಾಂಕದಲ್ಲಿ ರಿಯಾನ್ ಪರಾಗ್ (26 ರನ್) ಮತ್ತು ವಾಷಿಂಗ್ಟನ್ ಸುಂದರ್ (25 ರನ್) ಅಮೂಲ್ಯ ರನ್ ಗಳನ್ನು ಕಲೆಹಾಕಿ ಭಾರತ ಗಳಿಕೆ ನೂರರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಭಾರತ ನಿಗಧಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳನ್ನು ಗಳಿಸಿತು.
ಶ್ರೀಲಂಕಾ ಪರ ಮಹೀಶಾ ತೀಕ್ಷ್ಣ 3 ವಿಕೆಟ್ ಪಡೆದರೆ, ಹಸರಂಗ 2 ವಿಕೆಟ್ ಪಡೆದರು. ವಿಕ್ರಮ ಸಂಘೆ, ಫರ್ನಾಂಡೋ ಮತ್ತು ಮೆಂಡಿಸ್ ತಲಾ ಒಂದು ವಿಕೆಟ್ ಪಡೆದರು.