ಒಂದು ವಾರದ ಹಿಂದಷ್ಟೇ ಐಪಿಎಲ್ ಗೆ ವಿದಾಯ ಹೇಳಿದ್ದ ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಶನಿವಾರ ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಗಳಲ್ಲಿ ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ.
"ಕಳೆದ ಕೆಲವು ದಿನಗಳಲ್ಲಿ ಪಡೆದ ಪ್ರೀತಿ, ಬೆಂಬಲ ಮತ್ತು ಪ್ರೀತಿಯಿಂದ ಮಿಂದಿದ್ದೇನೆ. ಈ ಭಾವನೆಯನ್ನು ಸಾಧ್ಯವಾಗಿಸಿದ ಎಲ್ಲಾ ಅಭಿಮಾನಿಗಳಿಗೆ ತುಂಬಾ ಹೃದಯದ ಕೃತಜ್ಞತೆ ಮತ್ತು ಧನ್ಯವಾದಗಳು. ಸಾಕಷ್ಟು ಯೋಚಿಸಿದ ನಂತರ, ನಾನು ಪ್ರತಿನಿಧಿಸಿದ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದೆ. ಅಧಿಕೃತವಾಗಿ ನಾನು ನಿವೃತ್ತಿಯನ್ನು ಘೋಷಿಸಿದ್ದೇನೆ. ಮುಂದಿನ ದಿನಗಳ ಎದುರಾಗುವ ಸವಾಲುಗಳನ್ನು ಎದುರಿಸಲು ನಾನು ಸಜ್ಜಾಗುತ್ತಿದ್ದೇನೆ," ಎಂದು ದಿನೇಶ್ ಕಾರ್ತಿಕ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸುದೀರ್ಘ ಪ್ರಯಾಣವನ್ನು ಆಹ್ಲಾದಕರ ಮತ್ತು ಆನಂದದಾಯಕವಾಗಿಸಿದ ಎಲ್ಲಾ ಕೋಚ್ ಗಳು, ನಾಯಕರು, ಆಯ್ಕೆದಾರರು, ತಂಡದ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ದೇಶದಲ್ಲಿ ಕ್ರೀಡೆಯನ್ನು ಆಡುವ ಲಕ್ಷಾಂತರ ಜನರಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದ ಕೆಲವೇ ಅದೃಷ್ಟಶಾಲಿಗಳಲ್ಲಿ ನಾನು ಕೂಡ ಒಬ್ಬ ಎಂದು ಪರಿಗಣಿಸುತ್ತೇನೆ ಮತ್ತು ಇನ್ನೂ ಅನೇಕ ಅಭಿಮಾನಿಗಳು ಮತ್ತು ಸ್ನೇಹಿತರ ಅಭಿಮಾನವನ್ನು ಗಳಿಸಿದ ಅದೃಷ್ಟಶಾಲಿ ಎಂದು ಬರೆದುಕೊಂಡಿದ್ದಾರೆ.
ಈ ಎಲ್ಲಾ ವರ್ಷಗಳಲ್ಲಿ ನನ್ನ ಹೆತ್ತವರು ಶಕ್ತಿ ಮತ್ತು ಬೆಂಬಲದ ಆಧಾರ ಸ್ತಂಭವಾಗಿದ್ದರು. ಅವರ ಆಶೀರ್ವಾದವಿಲ್ಲದೆ ಇಲ್ಲಿಯವರೆಗೂ ಬರಲು ಆಗುತ್ತಿರಲಿಲ್ಲ. ನನ್ನ ಜೀವನದ ಪಯಣದಲ್ಲಿ ಜೊತೆಯಾದ ವೃತ್ತಿಪರ ಕ್ರೀಡಾಪಟು ದೀಪಿಕಾ ಪಲ್ಲಿಕಲ್ ಅವರಿಗೆ ಸಾಕಷ್ಟು ಋಣಿಯಾಗಿದ್ದೇನೆ. ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ಶುಭ ಹಾರೈಕೆಗಳಿಲ್ಲದೆ ಕ್ರಿಕೆಟ್ ಮತ್ತು ಕ್ರಿಕೆಟಿಗರು ಬೆಳೆಯಲು ಸಾಧ್ಯವಾಗಲ್ಲ ಎಂದು ಅವರು ಭಾವನೆಗಳನ್ನು ಹಂಚಿಕೊಂಡಿದ್ದಾರೆ.