ಬಾರ್ಬೋಡಾಸ್: ಐಸಿಸಿ ಟಿ20 ವಿಶ್ವಕಪ್ ನ 3ನೇ ಪಂದ್ಯದಲ್ಲಿ ಒಮನ್ ವಿರುದ್ಧ ನಮೀಬಿಯಾ ತಂಡ ಸೂಪರ್ ಓವರ್ ನಲ್ಲಿ ರೋಚಕ ಗೆಲುವು ಸಾಧಿಸಿದೆ.
ಬಾರ್ಬೋಡಾಸ್ ನ ಕಿಂಗ್ಸ್ ಟನ್ ಓವಲ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಒಮನ್ vs ನಮೀಬಿಯಾ ಪಂದ್ಯದಲ್ಲಿ ನಮೀಬಿಯಾ ತಂಡ ಸೂಪರ್ ಓವರ್ ನಲ್ಲಿ 21 ರನ್ ಗಳಿಸಿ ಒಮನ್ ತಂಡವನ್ನು ವಿರೋಚಿತವಾಗಿ ಸೋಲಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ನಮೀಬಿಯಾ ತಂಡ ಒಮನ್ ತಂಡವನ್ನು 19.4 ಓವರ್ ನಲ್ಲಿ ಕೇವಲ 109 ರನ್ ಗಳಿಗೇ ಆಲೌಟ್ ಮಾಡಿತು. ಈ ಅಲ್ಪ ಮೊತ್ತವನ್ನು ಬೆನ್ನು ಹತ್ತಿದ ನಮೀಬಿಯಾಗೆ ಓಮನ್ ಬೌಲರ್ ಗಳು ಇನ್ನಿಲ್ಲದಂತೆ ಕಾಡಿದರು.
ಹೆಚ್ಚು ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ನೀಡಿದ ಒಮನ್ ಬೌಲರ್ ಗಳು ನಿಗಧಿತ 20 ಓವರ್ ನಲ್ಲಿ ನಮೀಬಿಯಾ ಕೂಡ 109 ರನ್ ಗಳಿಸುವಂತೆ ನೋಡಿಕೊಂಡರು. ನಮೀಬಿಯಾ ಪರ ಜಾನ್ ಫ್ರೈಲಿಂಕ್ (45ರನ್), ನಿಕೋಲಾಸ್ ಡಾವಿನ್ 24 ರನ್ ಗಳಿಸಿದರಾದರೂ ಬಳಿಕ ಕೆಳ ಕ್ರಮಾಂಕದಲ್ಲಿ ಉಳಿದಾವ ಆಟಗಾರರೂ ಉತ್ತಮ ರನ್ ಗಳಿಸಲಿಲ್ಲ. ಪರಿಣಾಮ ಪಂದ್ಯ ಡ್ರಾ ಆಯಿತು.
ಟೂರ್ನಿಯ ಮೊದಲ ಸೂಪರ್ ಓವರ್ ಪಂದ್ಯ
ಫಲಿತಾಂಶಕ್ಕಾಗಿ ಈ ಪಂದ್ಯದಲ್ಲಿ ಟೂರ್ನಿಯಲ್ಲೇ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 3 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 21 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನು ಹತ್ತಿದ ಒಮನ್ ತಂಡ 10ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ನಮೀಬಿಯಾ ವಿರುದ್ಧ ವಿರೋಚಿತ ಸೋಲುಕಂಡಿತು.
ಈ ಲೋ ಸ್ಕೋರಿಂಗ್ ಪಂದ್ಯದಲ್ಲಿ 3 ವಿಕೆಟ್ ಮತ್ತು ಅಜೇಯ 9 ರನ್ ಮತ್ತು ಸೂಪರ್ ಓವರ್ ನಲ್ಲಿ 13 ರನ್ ಗಳಿಸಿದ್ದ ನಮೀಬಿಯಾ ಆಲ್ ರೌಂಡರ್ ಡೇವಿಡ್ ವೀಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.