ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2024ರ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ನ್ಯೂಯಾರ್ಕ್‌ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮಂಗಳವಾರದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಭದ್ರತಾ ಉಲ್ಲಂಘನೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ವರದಿಗಾರರ ಮೇಲೆ ಸಿಡಿಮಿಡಿಗೊಂಡಿರುವ ಘಟನೆ ನಡೆದಿದೆ.
ಪತ್ರಿಕಾಗೋಷ್ಠಿಯಲ್ಲಿ, ವರದಿಗಾರರೊಬ್ಬರು, ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆಯಲ್ಲಿ ಅಭಿಮಾನಿಯೊಬ್ಬರು ಇದ್ದಕ್ಕಿದ್ದಂತೆ ಮೈದಾನಕ್ಕೆ ಬಂದಿದ್ದರು. ಸೆಕ್ಯುರಿಟಿಗಳು ಅವನನ್ನು ಹಿಡಿದ ರೀತಿ ಮತ್ತು ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವಂತೆ ನೀವು ವಿನಂತಿಸುತ್ತಿದ್ದೀರಿ. ಆ ಸಮಯದಲ್ಲಿ ನಿಮ್ಮ ಭಾವನೆ ಹೇಗಿತ್ತು ಎಂಬ ಬಗ್ಗೆ ನೀವು ನಮಗೆ ಹೇಳಬಹುದೇ? ಎಂದು ಪ್ರಶ್ನಿಸಿದ್ದಾರೆ.
ವರದಿಗಾರರ ಈ ಪ್ರಶ್ನೆಯಿಂದ ನಿರಾಶೆಗೊಂಡ ರೋಹಿತ್ ಶರ್ಮಾ, ಆ ಘಟನೆ ಮತ್ತು ಈ ಪ್ರಶ್ನೆ ಎರಡೂ ತಪ್ಪಾಗಿದೆ ಎಂದು ಹೇಳಿದರು.
ಮೊದಲನೆಯದಾಗಿ, ಯಾರೂ ಪಿಚ್‌ನೊಳಗೆ ಬರಬಾರದು ಎಂದು ನಾನು ಹೇಳುತ್ತೇನೆ. ಇದು ಸರಿಯಲ್ಲ ಮತ್ತು ಈಗ ನೀವು ಕೇಳಿದ ಪ್ರಶ್ನೆಯು ಸಹ ಸರಿಯಾಗಿಲ್ಲ. ಏಕೆಂದರೆ, ನಾವು ಯಾರು ಓಡುತ್ತಾರೆ ಮತ್ತು ಮೈದಾನಕ್ಕೆ ಬರುತ್ತಾರೆ ಎಂಬ ವಿಷಯವನ್ನು ಪ್ರಚಾರ ಮಾಡಲು ಬಯಸುವುದಿಲ್ಲ ಎಂದು ರೋಹಿತ್ ಉತ್ತರಿಸಿದ್ದಾರೆ.
ನನ್ನ ಪ್ರಕಾರ, ಆಟಗಾರರ ಭದ್ರತೆ ಮುಖ್ಯವಾಗಿದೆ. ಅದೇ ರೀತಿ, ಪ್ರೇಕ್ಷಕರ ಸುರಕ್ಷತೆಯೂ ಮುಖ್ಯವಾಗಿದೆ. ನಾವು ಮೈದಾನದಲ್ಲಿ ಕ್ರಿಕೆಟ್ ಆಡುತ್ತೇವೆ. ಆದರೆ, ಜನರು ಹೊರಗೆ ಕುಳಿತುಕೊಳ್ಳುತ್ತಾರೆ. ಪ್ರತಿಯೊಂದಕ್ಕೂ ನಿಯಮಗಳು ಮತ್ತು ನಿಬಂಧನೆಗಳಿವೆ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಪ್ರತಿಯೊಬ್ಬರು ಅವುಗಳ್ನು ಅನುಸರಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಇದಕ್ಕಿಂತ ನಾನು ಹೆಚ್ಚೇನನ್ನು ಹೇಳಲು ಸಾಧ್ಯ ಎಂದಿದ್ದಾರೆ.
ಭಾರತ ಮತ್ತು ಅಮೆರಿಕದಲ್ಲಿ ನಿಯಮಗಳು ವಿಭಿನ್ನವಾಗಿವೆ. ಆದ್ದರಿಂದ, ನೀವು ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು. ಉತ್ತಮ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವನ್ನು ನೋಡಿ. ನೀವು ಆರಾಮವಾಗಿ ಪಂದ್ಯವನ್ನು ವೀಕ್ಷಿಸಬಹುದು. ಮೈದಾನಕ್ಕೆ ಓಡಿಬರುವ ಅಗತ್ಯವಿರುವುದಿಲ್ಲ. ಇದೆಲ್ಲವನ್ನೂ ಮಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ರೋಹಿತ್ ಹೇಳಿದರು.
ಪಂದ್ಯದ ವೇಳೆ ನಮ್ಮ ಗಮನವು ಬೇರೆ ಕೆಲವು ವಿಚಾರಗಳ ಮೇಲಿರುತ್ತದೆ. ಅಂತಹ ಸಮಯದಲ್ಲಿ ಯಾರು ಮೈದಾನಕ್ಕೆ ಬರುತ್ತಾರೆ ಮತ್ತು ಏನು ಮಾಡಬೇಕು ಎಂಬುದರ ಬಗ್ಗೆ ನಾವು ಗಮನಹರಿಸುವುದಿಲ್ಲ. ಇದರಿಂದ ಯಾವುದೇ ಆಟಗಾರನು ವಿಚಲಿತನಾಗುತ್ತಾನೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಪಂದ್ಯವನ್ನು ಹೇಗೆ ಗೆಲ್ಲಬೇಕು, ಹೇಗೆ ವಿಕೆಟ್ ಪಡೆಯಬೇಕು ಎಂಬುದಕ್ಕೆ ಬಹಳಷ್ಟು ಗಮನ ನೀಡಲಾಗಿರುತ್ತದೆ. ಆದ್ದರಿಂದ ಇಂತಹ ಘಟನೆಗಳಿಂದ ನಾವು ಆಟಗಾರರನ್ನು ವಿಚಲಿತಗೊಳಿಸಬಹುದು ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.