ಜಿಂಬಾಂಬ್ವೆ ವಿರುದ್ಧದ T20 ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದ್ದು, ಶುಭ್ಮನ್ ಗಿಲ್ ಅವರನ್ನು ನಾಯಕನನ್ನಾಗಿ ಮಾಡಲಾಗಿದೆ.
5 ಪಂದ್ಯಗಳ ಟಿ20 ಸರಣಿ ಇದಾಗಿದ್ದು, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಿಯಾನ್ ಪರಾಗ್ 2024 ರ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಫಲಿತಾಂಶವಾಗಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಪಂದ್ಯಗಳನ್ನಾಡಲಿದ್ದಾರೆ. ಪರಾಗ್ ಅಸ್ಸಾಂ ನಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಮೊದಲ ಕ್ರೀಡಾಪಟುವಾಗಿದ್ದಾರೆ.
ಭಾರತದ ಟಿ20 ವಿಶ್ವಕಪ್ ತಂಡದಲ್ಲಿದ್ದ ಕ್ರಿಕೆಟಿಗರ ಪೈಕಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಇಬ್ಬರೇ ಜಿಂಬಾಂಬ್ವೆ ವಿರುದ್ಧದ ಟಿ20 ಪಂದ್ಯಕ್ಕೆ ಆಯ್ಕೆಯಾಗಿರುವ ಆಟಗಾರರಾಗಿದ್ದಾರೆ. ರಿಂಕು ಸಿಂಗ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜು.6 ರಿಂದ 14 ವರೆಗೆ ಸರಣಿ ನಡೆಯಲಿದೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಋತುರಾಜ್ ಗಾಯಕ್ವಾಡ್ ಜಿಂಬಾಂಬ್ವೆ ವಿರುದ್ಧ ಸೆಣೆಸಲಿರುವ ಭಾರತ ತಂಡದಲ್ಲಿರಲಿದ್ದು, ಧ್ರುವ್ ಜುರೆಲ್ ಅವರನ್ನು ಸೆಕೆಂಡ್ ವಿಕೆಟ್ ಕೀಪರ್ ನನ್ನಾಗಿ ಆಯ್ಕೆ ಮಾಡಲಾಗಿದೆ.
ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಕೊನೆಯ ಬಾರಿಗೆ ಆಡಿದ ವಾಷಿಂಗ್ಟನ್ ಸುಂದರ್ ಅವರು ಈ ಸರಣಿಯ ಮೂಲಕ ಭಾರತೀಯ ತಂಡಕ್ಕೆ ಮರಳಿದ್ದಾರೆ.
ಟಿ20 ವಿಶ್ವಕಪ್‌ನೊಂದಿಗೆ ರಾಹುಲ್ ದ್ರಾವಿಡ್ ಅವಧಿ ಮುಗಿಯುತ್ತಿದ್ದಂತೆ ಜಿಂಬಾಂಬ್ವೆ ವಿರುದ್ಧದ ಸರಣಿಗೆ ಭಾರತ ತಂಡದ ಕೋಚ್ ಯಾರು ಎಂಬುದನ್ನು ಕಾದು ನೋಡಬೇಕಿದೆ.
ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (w/k), ಧ್ರುವ್ ಜುರೆಲ್ (w/k), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.
ವೇಳಾಪಟ್ಟಿ: ಭಾರತದ ಜಿಂಬಾಬ್ವೆ ಪ್ರವಾಸ
1ನೇ ಟಿ20: ಜುಲೈ 6, ಹರಾರೆ, ಸಂಜೆ 4.30 IST
2ನೇ ಟಿ20: ಜುಲೈ 7, ಹರಾರೆ, ಸಂಜೆ 4.30 IST
3ನೇ T20: ಜುಲೈ 10, ಹರಾರೆ, ಸಂಜೆ 4.30 IST
4ನೇ T20: ಜುಲೈ 13, ಹರಾರೆ, ಸಂಜೆ 4.30 IST
5 ನೇ T20: ಜುಲೈ 14, ಹರಾರೆ, ಸಂಜೆ 4.30 IST