ಬಾರ್ಬಡೋಸ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಗರಿ ಸೇರ್ಪಡೆಯಾಗಿದ್ದು, ಟಿ20 ವಿಶ್ವಕಪ್ ನ ಎಲ್ಲ ಆವೃತ್ತಿಗಳಲ್ಲಿ ಆಡಿ ಪ್ರಶಸ್ತಿ ಗೆದ್ದ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಟಿ20 ವಿಶ್ವಕಪ್ ನ ಐದು ಆವೃತ್ತಿಗಳನ್ನು ಆಡಿ ಪ್ರಶಸ್ತಿ ಗೆದ್ದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಬಾರಿ ನಡೆಯುತ್ತಿರುವ ಟಿ20 ವಿಶ್ವಕಪ್ 9ನೇ ಆವೃತ್ತಿಯಾಗಿದ್ದು, 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಟೂರ್ನಿಯ ಮೊದಲ ಆವೃತ್ತಿ ನಡೆದಿತ್ತು.
ಆ ಟೂರ್ನಿಯನ್ನು ಭಾರತ ತಂಡ, ಪಾಕಿಸ್ತಾನದ ವಿರುದ್ಧ ಗೆದ್ದು ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಟೂರ್ನಿಯ ಸೆಮೀಸ್ ನಲ್ಲಿ ಭಾರತ, ಆಸ್ಟ್ರೇಲಿಯಾವನ್ನು ಮಣಿಸಿ, ಫೈನಲ್ ಗೆ ಕಾಲಿಟ್ಟಿತ್ತು.
ಆ ಪಂದ್ಯದಲ್ಲಿ ಆಡಿದ್ದ ರೋಹಿತ್ ಶರ್ಮಾ, ಭಾರತದ ಇನ್ಸಿಂಗ್ಸ್ ನ ಕಡೆಯ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿದು ಕೇವಲ 8 ರನ್ ಗಳಿಸಿ ಅಜೇಯರಾಗುಳಿದಿದ್ದರು. ಅದಾದ ನಂತರ ಭಾರತ ಮತ್ತೆ ಸೆಮೀಸ್ ಹಂತಕ್ಕೆ ಕಾಲಿಟ್ಟಿದ್ದು 2014ರಲ್ಲಿ. ಸೆಮೀಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಿದ್ದ ಭಾರತ ಅಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 13 ಎಸೆತಗಳಲ್ಲಿ 24 ರನ್ ಗಳಿಸಿದ್ದರು.
ಬಳಿಕ ಭಾರತ ಪುನಃ ಸೆಮೀಸ್ ಹಂತಕ್ಕೆ ಕಾಲಿಟ್ಟಿದ್ದು 2016ರಲ್ಲಿ. ಆ ಸೆಮೀಸ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಿಸಿದ್ದ ಭಾರತದ ಪರವಾಗಿ ರೋಹಿತ್ ಶರ್ಮಾ, 31 ಎಸೆತಗಳಲ್ಲಿ 43 ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು.
ನಂತರ, 2022ರ ಟಿ20 ವಿಶ್ವಕಪ್ ನಲ್ಲಿಯೂ ಭಾರತ ಸೆಮೀಸ್ ಹಂತಕ್ಕೆ ಲಗ್ಗೆಯಿಟ್ಟಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಿದ್ದ ಭಾರತದ ಪರವಾಗಿ ರೋಹಿತ್ 28 ಎಸೆತಗಳಲ್ಲಿ 27 ರನ್ ಗಳನ್ನು ಗಳಿಸಿದ್ದರು. ಆದಾದ ಬಳಿಕ ಈ ಬಾರಿಯ ಆವೃತ್ತಿಯಲ್ಲಿಯೂ ಭಾರತ ಸೆಮೀಸ್ ಹಂತ ಪ್ರವೇಶಿಸಿದ್ದು, ಜೂ. 27ರಂದು ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪರವಾಗಿ 39 ಎಸೆತಗಳಲ್ಲಿ 57 ರನ್ ಗಳಿಸಿದ್ದಾರೆ.
ಶಕೀಬ್ ಅಲ್ ಹಸನ್ ಜೊತೆಗೊಂದು ದಾಖಲೆ!
ಟಿ20 ವಿಶ್ವಕಪ್ ನ ಎಲ್ಲಾ ಆವೃತ್ತಿಗಳ ಸೆಮೀಸ್ ಹಂತದಲ್ಲಿ ಆಡಿದ ಬ್ಯಾಟ್ಸ್ ಮನ್ ಎಂಬುದರ ಜೊತೆಗೆ ಅವರೀಗ ಎಲ್ಲಾ ಆವೃತ್ತಿಗಳಲ್ಲೂ ಕಾಣಿಸಿಕೊಂಡ ಏಕೈಕ ಕ್ರಿಕೆಟಿಗ ಎಂಬ ಮತ್ತೊಂದು ಹೆಗ್ಗಳಿಕೆಗೂ ಭಾಜನರಾಗಿದ್ದಾರೆ. ಇದೇ ರೀತಿಯ ಹೆಗ್ಗಳಿಕೆಗೆ ಪಾತ್ರರಾಗಿರುವ ಮತ್ತೊಬ್ಬ ಕ್ರಿಕೆಟಿಗನೆಂದರೆ ಅದು ಬಾಂಗ್ಲಾದೇಶದ ವೇಗಿ ಶಕೀಬ್ ಅಲ್ ಹಸನ್. ಆದರೆ, ಅವರಿಗೆ ಎಲ್ಲಾ ಆವೃತ್ತಿಗಳ ಸೆಮೀಸ್ ಹಂತದಲ್ಲಿ ಆಡಿದ ಆಟಗಾರನೆಂಬ ಹೆಗ್ಗಳಿಕೆ ಸಂದಿಲ್ಲ. ಈ ಕೀರ್ತಿಗೆ ಭಾರತದ ರೋಹಿತ್ ಶರ್ಮಾ ಮಾತ್ರ ಪಾತ್ರರಾಗಿದ್ದಾರೆ.