ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಟೆಸ್ಟ್ ಪಂದ್ಯಗಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವೇಗಿ ಜಸ್ಪ್ರೀತ್ ಬೂಮ್ರಾ ಅವರಿಗೆ ಉಪ ನಾಯಕ ಜವಾಬ್ದಾರಿ ವಹಿಸಲಾಗಿದೆ. ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಭಾರತ ತಂಡದ ನಾಯಕನಾಗಿ ಬೂಮ್ರಾ ಬಡ್ತಿ ಪಡೆಯುವ ಸಾಧ್ಯತೆಯನ್ನು ಇದು ತೋರಿಸುತ್ತಿದೆ.
ಅಕ್ಟೋಬರ್ 16 ರಿಂದ ಬೆಂಗಳೂರಿನಲ್ಲಿ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಅಕ್ಟೋಬರ್ 24 ರಿಂದ ಪುಣೆಯಲ್ಲಿ ಎರಡನೇ ಟೆಸ್ಟ್ ಹಾಗೂ ನವೆಂಬರ್ 1ರಿಂದ ಮುಂಬೈಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆೆ.
ನಾಯಕ ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆಸೀಸ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 22 ರಂದು ಫರ್ತ್ ನಲ್ಲಿ ಆರಂಭವಾಗಲಿದೆ.
ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧದ ಅದ್ಭುತ ಪ್ರಯತ್ನದ ನಂತರ ಬುಮ್ರಾ ಐಸಿಸಿ ಬೌಲರ್‌ಗಳ ಶ್ರೇಯಾಂಕದಲ್ಲಿ ಬೂಮ್ರಾ ನಂಬರ್ 1 ಸ್ಥಾನವನ್ನು ಮರಳಿ ಪಡೆದಿದ್ದರು. ಒಟ್ಟಾರೇ 38 ಟೆಸ್ಟ್ ಪಂದ್ಯಗಳನ್ನಾಡಿರುವ ಬೂಮ್ರಾ, 20.18ರ ಸರಾಸರಿಯಲ್ಲಿ 170 ವಿಕೆಟ್ ಪಡೆದಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳೆ ತಂಡದಲ್ಲಿದ್ದ ಯಶ್ ದಯಾಳ್ ಅವರನ್ನು ಗಾಯದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ. 15 ಮಂದಿ ಸದಸ್ಯರ ಹೊರತಾಗಿ ನಾಲ್ಕು ಮಂದಿ ಮೀಸಲು ಆಟಗಾರರನ್ನು ತಂಡದಲ್ಲಿ ಹೆಸರಿಸಲಾಗಿದೆ. ಹರ್ಷೀತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ ಟೀಂ ಇಂಡಿಯಾ ಜೊತೆಗೆ ಪ್ರಯಾಣಿಸಲಿದ್ದಾರೆ.
ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ) ಜಸ್ಪ್ರೀತ್ ಬುಮ್ರಾ (ಉಪ ನಾಯಕ) ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ ( ವಿಕೆಟ್ ಕೀಪರ್ ) ಧ್ರುವ ಜುರೆಲ್ ( ವಿಕೆಟ್ ಕೀಪರ್ ) ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್.