ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ 462 ರನ್ ಗಳಿಗೆ ಆಲೌಟ್ ಆಗಿದ್ದು, ಕಿವೀಸ್ ಪಡೆಗೆ ಗೆಲ್ಲಲು ಕೇವಲ 107ರನ್ ಗಳ ಸಾಧಾರಣ ಗುರಿ ನೀಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಆಲೌಟ್ ಆಗಿದ್ದ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, 462 ರನ್ ಗಳನ್ನು ಪೇರಿಸಿ ಆಲೌಟ್ ಆಗಿದೆ. ಆ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಕೇವಲ 107 ರನ್ ಗಳ ಅಲ್ಪ ಗುರಿ ನೀಡಿದೆ.
ಇನ್ನು 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ರೋಹಿತ್ ಶರ್ಮಾ (52 ರನ್), ವಿರಾಟ್ ಕೊಹ್ಲಿ (70 ರನ್) ಮತ್ತು ರಿಷಬ್ ಪಂತ್ (99 ರನ್) ಅರ್ಧಶತಕ ಸಿಡಿಸಿದರೆ, ಉದಯೋನ್ಮುಖ ಆಟಗಾರ ಸರ್ಫರಾಜ್ ಖಾನ್ (150 ರನ್) ಶತಕ ಸಿಡಿಸಿದರು.
ಕಿವೀಸ್ ಪರ ಮ್ಯಾಟ್ ಹೆನ್ರಿ ಮತ್ತು ವಿಲಿಯಂ ಓರೌರ್ಕೆ ತಲಾ 3 ವಿಕೆಟ್ ಪಡೆದರೆ, ಎಜಾಜ್ ಪಟೇಲ್ 2 ಮತ್ತು ಟಿಮ್ ಸೌಥಿ, ಗ್ಲೆನ್ ಫಿಲಿಪ್ಸ್ ತಲಾ 1 ವಿಕೆಟ್ ಪಡೆದರು.
ದಿನದಾಟ ಅಂತ್ಯ: ನ್ಯೂಜಿಲೆಂಡ್ 0/0
ಇನ್ನು ಭಾರತ ನೀಡಿದ 107 ರನ್ ಗಳ ಸಾಧಾರಾಣ ಗುರಿ ಬೆನ್ನು ಹತ್ತಿರುವ ನ್ಯೂಜಿಲೆಂಡ್ ತಂಡ 4 ಎಸೆಗಳನ್ನು ಎದುರಿಸಿದ್ದಾಗ ಮಂದ ಬೆಳಕಿನ ಕಾರಣ ಆಟ ನಿಂತಿತು. ಬಳಿಕ ಜೋರಾಗಿ ಮಳೆ ಬಂದ ಕಾರಣ ದಿನದಾಟವನ್ನು ಅಂತ್ಯಗೊಳಿಸಲಾಯಿತು. ಹೀಗಾಗಿ ನಾಳೆ ಪಂದ್ಯ ಮುಂದುವರೆಯಲಿದ್ದು, ಭಾರತ ಗೆಲ್ಲಬೇಕಿದ್ದರೆ 107ರನ್ ನೊಳಗೆ ನ್ಯೂಜಿಲೆಂಡ್ ಪಡೆಯನ್ನು ಆಲೌಟ್ ಮಾಡಬೇಕು. ಅಥವಾ ಇಡೀ ದಿನ ಮಳೆ ಬಂದು ಆಟ ನಿಲ್ಲಬೇಕು. ಆಗ ಪಂದ್ಯ ಡ್ರಾ ಆಗುತ್ತದೆ.