ಕ್ರಿಕೆಟ್

IPL 2025: ಪಂದ್ಯ ಶ್ರೇಷ್ಠ ಪ್ರಶಸ್ತಿ 'ಅವರಿಗೇ' ಸೇರಬೇಕು, ನನಗಲ್ಲ; ಅಭಿಮಾನಿಗಳ ಮನಗೆದ್ದ RCB ನಾಯಕ ರಜತ್ ಪಾಟಿದಾರ್

ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು 17 ವರ್ಷಗಳ ನಂತರ ಚೆಪಾಕ್‌ನಲ್ಲಿ ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಸೋಲಿಸುವ ಮೂಲಕ ದಾಖಲೆ ಬರೆದಿತ್ತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 12 ರನ್‌ಗಳ ರೋಚಕ ಜಯ ಸಾಧಿಸಿದೆ. ಬರೋಬ್ಬರಿ 10 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಾಂಖೆಡೆಯಲ್ಲಿ ಗೆಲುವು ಸಾಧಿಸಿದ್ದು, ತವರಿನಲ್ಲೇ ಮುಂಬೈಗೆ ಮುಖಭಂಗವಾಗಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ಸದ್ಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ತಮ್ಮ ಐದು ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದು ಎಂಟನೇ ಸ್ಥಾನದಲ್ಲಿದೆ.

ಪಂದ್ಯದ ನಂತರ ಮಾತನಾಡಿದ RCB ನಾಯಕ ರಜತ್ ಪಾಟೀದಾರ್, ಕಠಿಣ ಸಮಯದಲ್ಲಿ ಬೌಲರ್‌ಗಳು ತೋರಿದ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಮುಂಬೈನಲ್ಲಿನ ಬ್ಯಾಟರ್-ಸ್ನೇಹಿ ಪಿಚ್‌ನಲ್ಲಿ ಬ್ಯಾಟಿಂಗ್ ಘಟಕವನ್ನು ನಿಯಂತ್ರಿಸಿದ RCB ಬೌಲರ್‌ಗಳಿಗೆ 'ಪಂದ್ಯಶ್ರೇಷ್ಠ' ಪ್ರಶಸ್ತಿ ಸಲ್ಲುತ್ತದೆ ಎನ್ನುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು 17 ವರ್ಷಗಳ ನಂತರ ಚೆಪಾಕ್‌ನಲ್ಲಿ ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಸೋಲಿಸುವ ಮೂಲಕ ದಾಖಲೆ ಬರೆದಿತ್ತು. ಇದೀಗ ಗೆಲುವಿನ ಓಟವನ್ನು ಮುಂದುವರಿಸಿದ್ದು, ವಾಂಖೆಡೆಯನ್ನು ಕೈವಶ ಮಾಡಿಕೊಂಡಿದೆ. ತಿಲಕ್ ವರ್ಮಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸ್ಫೋಟಕ ಜೊತೆಯಾಟ ನಡೆಸಿದರೂ ಕೂಡ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿನಿಂದ ಕಾಪಾಡಲು ಸಾಧ್ಯವಾಗಲಿಲ್ಲ. 222 ರನ್‌ಗಳ ಗುರಿ ಬೆನ್ನಟ್ಟಿದ್ದ ಮುಂಬೈ ಅಂತಿಮವಾಗಿ 12 ರನ್‌ಗಳಿಂದ ಸೋಲು ಕಂಡಿದೆ.

ಪಂದ್ಯದ ನಂತರ ಆರ್‌ಸಿಬಿ ನಾಯಕ ಮಾತನಾಡಿ, 'ಅದು ನಿಜಕ್ಕೂ ಅದ್ಭುತ ಪಂದ್ಯವಾಗಿತ್ತು. ಬೌಲರ್‌ಗಳು ಧೈರ್ಯ ತೋರಿಸಿದ ರೀತಿ ಅದ್ಭುತವಾಗಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಪ್ರಶಸ್ತಿ ಬೌಲಿಂಗ್ ಘಟಕಕ್ಕೆ ಸಲ್ಲುತ್ತದೆ. ಏಕೆಂದರೆ, ಈ ಮೈದಾನವು ಬ್ಯಾಟಿಂಗ್ ಸ್ನೇಹಿಯಾಗಿದ್ದು, ಕಡಿಮೆ ರನ್‌ಗಳಿಗೆ ಕಟ್ಟಿಹಾಕುವುದು ಸುಲಭವಲ್ಲ. ಆದ್ದರಿಂದ ಅದರ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ವೇಗದ ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ ಅದ್ಭುತವಾಗಿತ್ತು. ಕೃನಾಲ್ ಪಾಂಡ್ಯ ಅವರು ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಕೊನೆಯ ಓವರ್‌ನಲ್ಲಿ, ಅದು ಸುಲಭವಾಗಿರಲಿಲ್ಲ. ಅವರು ಬೌಲ್ ಮಾಡಿದ ರೀತಿ ಮತ್ತು ಅವರು ತೋರಿಸಿದ ಧೈರ್ಯ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

'ಡೆತ್ ಓವರ್‌ನಲ್ಲಿ ಡಿಫೆಂಡ್ ಮಾಡುವಾಗ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿಯೇ, ಕೊನೆಯ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಅವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಲಾಯಿತು. ವಿಕೆಟ್ ಉತ್ತಮವಾಗಿತ್ತು ಮತ್ತು ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತಿತ್ತು. ಹಾರ್ದಿಕ್ ಪಾಂಡ್ಯ ಓವರ್ ನಂತರ, ಪರಿಸ್ಥಿತಿ ಬೇರೆಯೇ ಆಗಿತ್ತು. wrist spinner ಪ್ರಮುಖ ಪಾತ್ರವಹಿಸಿದರು. ಅವರು ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು (ಯುವ ಸ್ಪಿನ್ನರ್ ಸುಯೇಶ್ ಶರ್ಮಾ, 4 ಓವರ್‌ಗಳಲ್ಲಿ 0/32 ಸ್ಪೆಲ್ ಉತ್ತಮವಾಗಿತ್ತು)' ಎಂದರು.

ಮುಂಬೈ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡಿತು. ಆರಂಭಿಕರಾಗಿ ಬಂದಿದ್ದ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 67 ರನ್ ಗಳಿಸಿದರು. ಸಾಲ್ಟ್ ಬಳಿಕ ಬಂದ ದೇವದತ್ ಪಡಿಕ್ಕಲ್ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿ 22 ಎಸೆತಗಳಲ್ಲಿ 37 ರನ್ ಗಳಿಸಿದರು. ಕೊಹ್ಲಿ ಮತ್ತು ಪಡಿಕ್ಕಲ್ 91 ರನ್‌ಗಳ ಉತ್ತಮ ಜೊತೆಯಾಟ ನಡೆಸಿದರು. ಈ ಜೋಡಿ ಔಟಾದ ನಂತರ, ನಾಯಕ ರಜತ್ ಪಾಟಿದಾರ್ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ನೆರವಿನೊಂದಿಗೆ 32 ಎಸೆತಗಳಲ್ಲಿ 64 ರನ್ ಗಳಿಸಿದರು ಮತ್ತು ಜಿತೇಶ್ ಶರ್ಮಾ 19 ಎಸೆತಗಳಲ್ಲಿ 40 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಅಂತಿಮವಾಗಿ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 221 ರನ್ ಕಲೆಹಾಕಿತು.

ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ (2/45) ಮತ್ತು ಟ್ರೆಂಟ್ ಬೌಲ್ಟ್ (2/57) ತಲಾ ಎರಡು ವಿಕೆಟ್ ಪಡೆದರೂ, ರನ್ ಬಿಟ್ಟುಕೊಟ್ಟರು. ಯುವ ಬೌಲರ್ ವಿಘ್ನೇಶ್ ಪುತ್ತೂರ್ ಕೂಡ ಒಂದು ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ನಾಲ್ಕು ಓವರ್‌ಗಳಲ್ಲಿ 29 ರನ್ ನೀಡಿದರು.

222 ರನ್ ಗುರಿ ಬೆನ್ನತ್ತಿದ ಮುಂಬೈಗೆ 12 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತ್ತು. ತಿಲಕ್ ವರ್ಮಾ (29 ಎಸೆತಗಳಲ್ಲಿ 56, ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (15 ಎಸೆತಗಳಲ್ಲಿ 42, ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು) ನಡುವಿನ ಸ್ಫೋಟಕ 89 ರನ್‌ಗಳ ಜೊತೆಯಾಟವು ಒಂದು ಹಂತದಲ್ಲಿ ಪಂದ್ಯದ ಗತಿಯನ್ನು ಬದಲಿಸಿತ್ತು.

ಆದರೆ, ಕೃನಾಲ್ (4/45), ಜೋಶ್ ಹೇಜಲ್‌ವುಡ್ (2/37) ಮತ್ತು ಭುವನೇಶ್ವರ್ ಕುಮಾರ್ (1/48) ಅವರು ಸರಿಯಾದ ಸಮಯದಲ್ಲಿ ನಿರ್ಣಾಯಕ ವಿಕೆಟ್‌ಗಳನ್ನು ಪಡೆದು ಆರ್‌ಸಿಬಿಗೆ 12 ರನ್‌ಗಳ ಗೆಲುವು ಸಾಧಿಸಲು ಸಹಾಯ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT