ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ತಂಡದ ವೇಗಿ ಜೋಫ್ರಾ ಆರ್ಚರ್ ಅಪರೂಪದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ಇಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ತಾನ ರಾಯಲ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಆದರಂತೆ ಗುಜರಾತ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಸಾಯಿ ಸುದರ್ಶನ್ (82) ಜಾಸ್ ಬಟ್ಲರ್ (36) ಮತ್ತು ಶಾರುಖ್ ಖಾನ್ (36)ರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 217ರನ್ ಕಲೆಹಾಕಿತು. ಆ ಮೂಲಕ ರಾಜಸ್ತಾನಕ್ಕೆ ಗೆಲ್ಲಲು 218ರನ್ ಗಳ ಬೃಹತ್ ಗುರಿ ನೀಡಿತು.
ಜೋಫ್ರಾ ಆರ್ಚರ್ ದಾಖಲೆ
ಇನ್ನು ಇದೇ ಇನ್ನಿಂಗ್ಸ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಆರಂಭಿಕ ಬೌಲರ್ ಜೋಫ್ರಾ ಆರ್ಚರ್ ಪಂದ್ಯದ ಆರಂಭದಿಂದಲೂ ಚುರುಕಾದ ಲಯದಲ್ಲಿ ಕಾಣಿಸಿಕೊಂಡರು. ಇಂಗ್ಲಿಷ್ ವೇಗಿ ಕೆಲವು ವೇಗದ ಎಸೆತಗಳೊಂದಿಗೆ ಗುಜರಾತ್ ಬ್ಯಾಟ್ಸ್‌ಮನ್‌ಗಳ ಕೆಂಗೆಡಿಸಿದರು.
ಪಂದ್ಯದ ಮೊದಲ ಓವರ್‌ನಲ್ಲಿ, ಜೋಫ್ರಾ ಆರ್ಚರ್ ಎಸೆದ ಎಸೆತವೊಂದು ದಾಖಲೆ ನಿರ್ಮಿಸಿತು. ಆ ಎಸೆತ ಬರೊಬ್ಬರಿ 152.3 ಕಿಮೀ ವೇಗ ಹೊಂದಿತ್ತು. ಇದು ಹಾಲಿ ಐಪಿಎಲ್ ಟೂರ್ನಿಯಲ್ಲಿ ದಾಖಲಾದ 2ನೇ ವೇಗದ ಎಸೆತವಾಗಿದೆ. ಈ ಹಿಂದೆ LSG vs PBKS ಪಂದ್ಯದ ಸಮಯದಲ್ಲಿ ಲಾಕಿ ಫರ್ಗುಸನ್ 153.2 kmph ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇದು ಹಾಲಿ ಸೀಸನ್ ನಲ್ಲಿ ಬಂದ ವೇಗದ ಏಸೆತವಾಗಿದೆ.
ಅಂದಹಾಗೆ ಐಪಿಎಲ್ ನಲ್ಲಿ ವೇಗದ ಎಸೆತದ ಪಟ್ಟಿಯಲ್ಲಿ ಜೋಫ್ರಾ ಆರ್ಚರ್ ಎರಡು ಬಾರಿ ಟಾಪ್ ಐದು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಇಂಗ್ಲಿಷ್ ವೇಗಿ 151.3 kmph ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಅಂತೆಯೇ ಈ ಪಟ್ಟಿಯಲ್ಲಿ ಅವರು ಎರಡು ಬಾರಿ ಕಾಣಿಸಿಕೊಂಡಿರುವುದು ಪಂದ್ಯಾವಳಿಯಲ್ಲಿ ಅವರು ಪಡೆದ ಲಯವನ್ನು ಹೇಳುತ್ತದೆ.