ವಿಶ್ವದ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಯುತ್ತಿರುವ ವೇಳೆಯಲ್ಲೇ ಪಾಕಿಸ್ತಾನ ಸೂಪರ್ ಲೀಗ್ (PSL) ನಡೆಯುತ್ತಿರುವುದರಿಂದ ಐಪಿಎಲ್ ಅನ್ನು ಆಯ್ಕೆ ಮಾಡಿಕೊಂಡು ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಂದು ವರ್ಷದ ನಿಷೇಧ ಹೇರಿದೆ.
ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದ್ದ ಬಾಷ್, ಜನವರಿ 13 ರಂದು ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಪ್ಲೇಯರ್ಸ್ ಡ್ರಾಫ್ಟ್‌ನ 10ನೇ ಆವೃತ್ತಿಯಲ್ಲಿ ಪೇಶಾವರ್ ಝಲ್ಮಿಯ ಡೈಮಂಡ್ ವಿಭಾಗದಲ್ಲಿ ಆಯ್ಕೆಯಾಗಿದ್ದರು. ನಂತರ ದಕ್ಷಿಣ ಆಫ್ರಿಕಾದವರೇ ಆದ ಲಿಜಾದ್ ವಿಲಿಯಮ್ಸ್ ಗಾಯಗೊಂಡಿದ್ದರಿಂದ ಮುಂಬೈ ಇಂಡಿಯನ್ಸ್ ತಂಡ ಬಾಷ್ ಅವರನ್ನು ಘೋಷಿಸಿತ್ತು. ಬಾಷ್ ಈ ಆಫರ್ ಒಪ್ಪಿಕೊಂಡು ಪಿಎಸ್ಎಲ್‌ನಿಂದ ಹೊರನಡೆದಿದ್ದರು.
ಈ ವರ್ಷದ ಪಿಎಸ್‌ಎಲ್ ಮತ್ತು ಐಪಿಎಲ್ ಏಕಕಾಲದಲ್ಲಿ ನಡೆಯುತ್ತಿರುವುದರಿಂದ ಬಾಷ್ ಐಪಿಎಲ್ ಅನ್ನು ಆಯ್ಕೆ ಮಾಡಿಕೊಂಡಿದ್ದರು ಮತ್ತು ಪಿಎಸ್‌ಎಲ್‌ನಿಂದ ಹಿಂದೆ ಸರಿದರು. ಇದರಿಂದಾಗಿ ಕೋಪಗೊಂಡ ಪಿಸಿಬಿ ಬಾಷ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.
ಪಿಸಿಬಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಹೇಳಿಕೆಯಲ್ಲಿ, ಬಾಷ್ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಕ್ಕಾಗಿ 'ವಿಷಾದ' ವ್ಯಕ್ತಪಡಿಸಿದ್ದಾರೆ ಮತ್ತು 2026ರಲ್ಲಿ 11ನೇ ಆವೃತ್ತಿಯಲ್ಲಿ ಭಾಗವಹಿಸದಂತೆ ಅವರಿಗೆ ನಿಷೇಧ ಹೇರಲಾಗುವುದು ಎಂದು ಹೇಳಲಾಗಿದೆ.
'ಪಿಎಸ್‌ಎಲ್‌ನಿಂದ ಹಿಂದೆ ಸರಿಯುವ ನನ್ನ ನಿರ್ಧಾರಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಪಾಕಿಸ್ತಾನದ ಜನರು, ಪೇಶಾವರ್ ಝಲ್ಮಿಯ ಅಭಿಮಾನಿಗಳು ಮತ್ತು ವ್ಯಾಪಕ ಕ್ರಿಕೆಟ್ ಸಮುದಾಯಕ್ಕೆ ನಾನು ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ. ನನ್ನ ನಡೆಯಿಂದ ಉಂಟಾದ ನಿರಾಶೆಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ' ಎಂದು ಐಪಿಎಲ್ 2025ರಲ್ಲಿ ಎಂಐ ಪರ ಇನ್ನೂ ಆಡದ ಬಾಷ್ ಪಿಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಪೇಶಾವರ್ ಝಲ್ಮಿಯ ನಿಷ್ಠಾವಂತ ಅಭಿಮಾನಿಗಳಿಗೆ, ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನನ್ನ ನಡೆಗೆ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ದಂಡ ಮತ್ತು ಪಿಎಸ್ಎಲ್‌ನಿಂದ ಒಂದು ವರ್ಷದ ನಿಷೇಧ ಸೇರಿದಂತೆ ಎಲ್ಲ ರೀತಿಯ ಪರಿಣಾಮಗಳನ್ನು ಸ್ವೀಕರಿಸುತ್ತೇನೆ. ಇದು ನನಗೆ ಕಠಿಣ ಪಾಠವಾಗಿದೆ. ಇದರಿಂದ ನಾನು ಪಾಠ ಕಲಿಯುತ್ತೇನೆ ಮತ್ತು ಭವಿಷ್ಯದಲ್ಲಿ ಅಭಿಮಾನಿಗಳ ನವೀಕೃತ ಸಮರ್ಪಣೆ ಮತ್ತು ನಂಬಿಕೆಯೊಂದಿಗೆ ಪಿಎಸ್ಎಲ್‌ಗೆ ಮರಳಲು ಆಶಿಸುತ್ತೇನೆ' ಎಂದಿದ್ದಾರೆ.
ಭವಿಷ್ಯದಲ್ಲಿ ಎರಡೂ ಲೀಗ್‌ಗಳು ಘರ್ಷಣೆ ಮುಂದುವರಿಸಿದರೆ, ನಿರೀಕ್ಷೆಯಂತೆ, ಪಿಎಸ್‌ಎಲ್‌ಗೆ ಸಹಿ ಹಾಕಿದ ನಂತರ ಆಟಗಾರರು ಐಪಿಎಲ್‌ಗೆ ಬದಲಾಯಿಸುವುದನ್ನು ತಡೆಯಲು ಪಿಸಿಬಿ ಬಾಷ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಪ್ಪಿಸಲೆಂದೇ ಈ ಬಾರಿ ಐಪಿಎಲ್ ಹರಾಜಿನಲ್ಲಿ ಆಯ್ಕೆಯಾಗದ ಆಟಗಾರರನ್ನು ಮಾತ್ರ ಪಿಎಸ್ಎಲ್‌ಗೆ ಡ್ರಾಫ್ಟ್ ಮಾಡಲಾಯಿತು.
ಇದರ ಪರಿಣಾಮವಾಗಿ, ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ಡೇವಿಡ್ ವಾರ್ನರ್, ಡ್ಯಾರಿಲ್ ಮಿಚೆಲ್, ಜೇಸನ್ ಹೋಲ್ಡರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಕೇನ್ ವಿಲಿಯಮ್ಸನ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಆಟಗಾರರು ಇದ್ದರು.
ಪಿಎಸ್ಎಲ್‌ನ ಹತ್ತನೇ ಆವೃತ್ತಿಯು ಏಪ್ರಿಲ್ 11 ರಂದು ಪ್ರಾರಂಭವಾಗುತ್ತದೆ. ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ರಾವಲ್ಪಿಂಡಿಯಲ್ಲಿ ಲಾಹೋರ್ ಖಲಂದರ್ಸ್ ವಿರುದ್ಧ ಸೆಣಸಲಿದೆ.