ಚಂಡೀಗಢ: ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ರೋಚಕ ಕದನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿದೆ. ಈ ಪಂದ್ಯದ ಕುರಿತು ತಮ್ಮ ಸಂತಸ ಹಂಚಿಕೊಂಡಿರುವ ಪಂಜಾಬ್ ಕಿಂಗ್ಸ್ ಕೋಚ್ ರಿಕ್ಕಿ ಪಾಂಟಿಂಗ್ ತಮ್ಮ ಆಟಗಾರರನ್ನು ಹಾಡಿ ಹೊಗಳಿದ್ದಾರೆ.
ಚಂಡೀಗಢದ ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಕೇವಲ 111 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 15.1 ಓವರ್‌ನಲ್ಲಿ 95 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಕೋಲ್ಕತ್ತಾ ಹೀನಾಯವಾಗಿ ಸೋತಿತು.
ಪಂಜಾಬ್ ತಂಡದ ಕೋಚ್ ರಕ್ಕಿ ಪಾಂಟಿಂಗ್, 'ಕಳಪೆ ಬ್ಯಾಟಿಂಗ್ ಪ್ರದರ್ಶನದ ನಂತರ ಯುಜ್ವೇಂದ್ರ ಚಾಹಲ್ ಮತ್ತು ಮಾರ್ಕೊ ಜಾನ್ಸೆನ್ ನೇತೃತ್ವದ ಅದ್ಭುತ ಬೌಲಿಂಗ್ ಪ್ರಯತ್ನವು ಪಂದ್ಯವನ್ನು ತಿರುಗಿಸಿತು.
ಹೃದಯ ಬಡಿತ ಇನ್ನೂ ಹೆಚ್ಚಾಗಿದೆ. ನನಗೆ ಈಗ 50 ವರ್ಷ ಮತ್ತು ಈ ರೀತಿಯ ಹೆಚ್ಚಿನ ಪಂದ್ಯಗಳನ್ನು ನೋಡಿದರೆ ಹಾರ್ಟ್ ಪೇಷಂಟ್ ಆಗುತ್ತೇವೆ. 16 ರನ್ ಗಳ ಅಂತರದಲ್ಲಿ 112 ರನ್‌ಗಳನ್ನು ಡಿಫೆಂಡ್ ಮಾಡಿ ಗೆಲ್ಲುವುದು ಸುಲಭವಲ್ಲ. ನಾನು ವಾಸ್ತವವಾಗಿ ಪಂದ್ಯದ ಅರ್ಧಭಾಗದಲ್ಲೇ ಹುಡುಗರಿಗೆ ಈ ರೀತಿಯ ಸಣ್ಣ ಚೇಸ್‌ಗಳು ಕೆಲವೊಮ್ಮೆ ಅತ್ಯಂತ ಕಠಿಣವಾಗುತ್ತವೆ ಎಂದು ಹೇಳಿದ್ದೆ" ಎಂದು ಹೇಳಿದರು.
ಇದೇ ವೇಳೆ ಪಾಂಟಿಂಗ್ ಪಿಚ್ ಸ್ವರೂಪವನ್ನು ಒಪ್ಪಿಕೊಂಡರು. 'ಇದು ಆಟದ ಉದ್ದಕ್ಕೂ ರನ್ ಗಳಿಸುವುದನ್ನು ಕಷ್ಟಕರವಾಗಿಸಿತು. ಪಿಚ್ ಸುಲಭವಾಗಿರಲಿಲ್ಲ, ಆಟದ ಉದ್ದಕ್ಕೂ ನೀವು ನೋಡುವಂತೆ, ಅದು ಖಂಡಿತವಾಗಿಯೂ ಕಠಿಣವಾಗಿತ್ತು. ಆದರೆ ಇಂದು ರಾತ್ರಿ ಚಹಲ್ ಉತ್ತಮ ಬೌಲಿಂಗ್ ಸ್ಪೆಲ್ ಮಾಡಿದರು ಹೇಳಿದರು.
ಚಹಲ್ ಫಿಟ್ನೆಸ್ ಪರೀಕ್ಷೆ
ಅಂತೆಯೇ ಪಂದ್ಯದ ಮೊದಲು ಚಹಲ್ ಭುಜದ ಗಾಯದಿಂದ ಬಳಲುತ್ತಿದ್ದರು ಮತ್ತು ಆಡಲು ಅನುಮತಿ ಪಡೆಯುವ ಮೊದಲು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಯಿತು ಎಂದು ರಿಕ್ಕಿ ಪಾಂಟಿಂಗ್ ಬಹಿರಂಗಪಡಿಸಿದರು.
'ಇಂದು ಪಂದ್ಯಕ್ಕೂ ಮುನ್ನ ಅವರಿಗೆ ಫಿಟ್ನೆಸ್ ಪರೀಕ್ಷೆ ನಡೆಸಲಾಗಿತ್ತು. ಕಳೆದ ಪಂದ್ಯದಲ್ಲಿ ಭುಜದ ಗಾಯವಾಗಿತ್ತು. ನಾನು ಚಹಲ್ ರನ್ನು ಹೊರಗೆ ಕರೆದೊಯ್ದು ನೀವು ಆಡಲು ಫಿಟ್ ಇದ್ದೀರಾ..? ನೀವು ಚೆನ್ನಾಗಿದ್ದೀರಾ?' ಎಂದು ಕೇಳಿದ್ದೆ. ಅದಕ್ಕೆ ಚಹಲ್ 'ಕೋಚ್, ನಾನು 100 ಪ್ರತಿಶತ ಫಿಟ್ ಇದ್ದು, ಆಡುತ್ತೇನೆ ಎಂದಿದ್ದರು ಎಂದು ಪಾಟಿಂಗ್ ಹೇಳಿದರು.
ಪಂದ್ಯ ಗೆದ್ದರೂ ತಂಡದ ಬಗ್ಗೆ ಹೆಮ್ಮೆ ಇಲ್ಲ
ಅಂತೆಯೇ ತಂಡದ ಬ್ಯಾಟಿಂಗ್ ವೈಫಲ್ಯದ ಕುರಿತು ಕಟುವಾಗಿಯೇ ಮಾತನಾಡಿರುವ ಪಾಟಿಂಗ್, "ನಾವು ಆ ಪಂದ್ಯವನ್ನು ಸೋತಿದ್ದರೂ ಸಹ, ದ್ವಿತೀಯಾರ್ಧದಲ್ಲಿ ನಾವು ಹೇಗೆ ಆಡಿದೆವು ಎಂಬುದರ ಬಗ್ಗೆ ನನಗೆ ಹೆಮ್ಮೆಯೆನಿಸಲಿಲ್ಲ. ನಮ್ಮ ಬ್ಯಾಟಿಂಗ್ ಕಳಪೆಯಾಗಿತ್ತು. ಶಾಟ್ ಆಯ್ಕೆ ಮತ್ತು ಕಾರ್ಯನಿರ್ವಹಣೆ - ಅದೆಲ್ಲವೂ ಕಳಪೆಯಾಗಿತ್ತು. ಈ ಗೆಲುವು ಪಂಜಾಬ್‌ನ ಋತುವಿನಲ್ಲಿ ಒಂದು ಮಹತ್ವದ ತಿರುವು ಆಗಿರಬಹುದು ಎಂದು ಪಾಂಟಿಂಗ್ ಹೇಳಿದರು.
"ಇಂತಹ ಗೆಲುವುಗಳು ಯಾವಾಗಲೂ ಅತ್ಯಂತ ಸಿಹಿಯಾಗಿರುತ್ತವೆ. ನೀವು ಇದನ್ನು ಸಾಧಿಸಲು ಸಾಧ್ಯವಾದರೆ, ಹೆಚ್ಚಿನ ಆಟಗಾರರು ಭಾಗಿಯಾಗಿರುವಂತೆಯೇ ಇದು ಉತ್ತಮ ಗೆಲುವಾಗಿರಬೇಕು. ನಾನು ಐಪಿಎಲ್‌ನಲ್ಲಿ ಬಹಳಷ್ಟು ಪಂದ್ಯಗಳಿಗೆ ತರಬೇತಿ ನೀಡಿದ್ದೇನೆ ಮತ್ತು ಅದು ನಾನು ಪಡೆದ ಅತ್ಯುತ್ತಮ ಗೆಲುವಾಗಿರಬಹುದು" ಎಂದು ಅವರು ಹೇಳಿದರು.