ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 16 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಕೆಕೆಆರ್ 95 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಮಾಡಿದ್ದರೆ, ಇತ್ತ ಪಂಜಾಬ್ ಕಿಂಗ್ಸ್ 111 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡು ಐಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡ ಸಾಧನೆ ಮಾಡಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಯ್ದುಕೊಂಡಿತು. ಕೆಕೆಆರ್ ಬೌಲಿಂಗ್ ದಾಳಿಗೆ ಸಿಲುಕಿ ಪಂಜಾಬ್ ಕಿಂಗ್ಸ್ 15.3 ಓವರ್‌ಗಳಲ್ಲೇ 111 ರನ್ ಗಳಿಗೆ ಆಲೌಟ್ ಆಯಿತು. 112 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಬ್ಯಾಟರ್‌ಗಳು ಕೂಡ ಪಂಜಾಬ್ ಕಿಂಗ್ಸ್ ತಂಡದ ಬೌಲರ್ ದಾಳಿಗೆ ತತ್ತರಿಸಿತು. ಕೆಕೆಆರ್ 95 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಯುಜ್ವೇಂದ್ರ ಚಾಹಲ್ 4 ಓವರ್‌ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದುಕೊಂಡರು. ಈ ಮೂಲಕ ತಂಡದ ಗೆಲುವಿಗೆ ಕಾರಣರಾದರು.
2009ರಲ್ಲಿ ಸಿಎಸ್‌ಕೆ ತಂಡವು ಪಂಜಾಬ್ ವಿರುದ್ಧವೇ 116 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ, ಚಾಹಲ್ ಅವರ ಮಾರಕ ದಾಳಿಯಿಂದಾಗಿ ಪಂಜಾಬ್ ಕಿಂಗ್ಸ್ ತಂಡವು 112 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳುವ ಮೂಲಕ ಈ ದಾಖಲೆಯನ್ನು ಮುರಿದಿದೆ.
ಯುಜ್ವೇಂದ್ರ ಚಾಹಲ್ ಅವರ ಅದ್ಭುತ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿರುವ ಆರ್‌ಜೆ ಮಹ್ವಾಶ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಲೆಗ್-ಸ್ಪಿನ್ನರ್ ಅನ್ನು ಹೊಗಳಿ ಪೋಸ್ಟ್ ಮಾಡಿದ್ದಾರೆ. ಚಾಹಲ್ ಜೊತೆಗಿನ ತಮ್ಮ ಫೋಟೊವನ್ನು ಅಪ್‌ಲೋಡ್ ಮಾಡಿ, 'ಎಂತಹ ಪ್ರತಿಭಾನ್ವಿತ ವ್ಯಕ್ತಿ! ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದವರು ಎಂಬುದಕ್ಕೆ ಒಂದು ಕಾರಣವಿದೆ! ಅಸಂಭವ!" ಎಂದು ಶೀರ್ಷಿಕೆ ನೀಡಿದ್ದಾರೆ.
ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಬಳಿಕ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಚಾಹಲ್ ಅವರು ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಆರ್‌ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬಂದಿದ್ದವು.
ಈ ಕುರಿತು ಪ್ರತಿಕ್ರಿಯಿಸಿದ್ದ ಮಹ್ವಾಶ್, 'ನಾನು ಸಿಂಗಲ್ ಆಗಿದ್ದೇನೆ ಮತ್ತು ಇಂದಿನ ಕಾಲದಲ್ಲಿ ಮದುವೆಯ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ನಾನು ಮದುವೆಯಾಗಬೇಕಾದಾಗ ಮಾತ್ರ ಡೇಟಿಂಗ್ ಮಾಡುತ್ತೇನೆ. ನಾನು ಕ್ಯಾಶುಯಲ್ ಡೇಟ್‌ಗಳಿಗೆ ಹೋಗುವುದಿಲ್ಲ ಏಕೆಂದರೆ, ನಾನು ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಮಾತ್ರ ಡೇಟಿಂಗ್ ಮಾಡುತ್ತೇನೆ' ಎಂದಿದ್ದರು.