ಸ್ಟಾರ್ ಕಪಲ್ ಆಗಿಯೇ ಗುರುತಿಸಿಕೊಂಡಿದ್ದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಇದೀಗ ವಿಚ್ಛೇದನ ಪಡೆದಿದಿದ್ದಾರೆ. ಈ ಜೋಡಿ ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಬಳಿಕ ಚಾಹಲ್ ಅವರನ್ನು ಭಾರತೀಯ ರಾಷ್ಟ್ರೀಯ ತಂಡದಿಂದ ಕೈಬಿಡಲಾಯಿತು. ಆಗ, ಅವರನ್ನು ಟ್ರೋಲ್ ಮಾಡಲಾಯಿತು. ಈ ಕುರಿತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಸ್ಪಿನ್ನರ್ ಮಾತನಾಡಿದ್ದಾರೆ.
ವಿಚ್ಛೇದನದ ನಂತರ ಮೊದಲ ಬಾರಿಗೆ ಮಾತನಾಡಿರುವ ಚಾಹಲ್, ವಿಚ್ಛೇದನದ ನಂತರ ಸುಳ್ಳು ಆರೋಪಗಳು ತಮ್ಮನ್ನು ಬಹುತೇಕ ಕುಗ್ಗಿಸಿದವು. 'ನನಗೆ ಆತ್ಮಹತ್ಯೆಯಂತಹ ಆಲೋಚನೆಗಳು ಬಂದವು, ನನ್ನ ಜೀವನದಿಂದ ನಾನು ಬೇಸತ್ತು ಹೋಗಿದ್ದೆ, ನಾನು 2 ಗಂಟೆಗಳ ಕಾಲ ಅಳುತ್ತಿದ್ದೆ. ನಾನು ಕೇವಲ 2 ಗಂಟೆಗಳ ಕಾಲ ಮಲಗುತ್ತಿದ್ದೆ. ಅದು 40-45 ದಿನಗಳವರೆಗೆ ನಡೆಯಿತು. ನಾನು ಕ್ರಿಕೆಟ್‌ನಿಂದ ವಿರಾಮ ಬಯಸಿದ್ದೆ' ಎಂದು ಚಾಹಲ್ ಫಿಗರಿಂಗ್ ಔಟ್ ವಿತ್ ರಾಜ್ ಶಮಾನಿ ಸಂದರ್ಶನದಲ್ಲಿ ಹೇಳಿದ್ದಾರೆ.
'ನಾನು ಕ್ರಿಕೆಟ್‌ನಲ್ಲಿ ತುಂಬಾ ಬ್ಯುಸಿಯಾಗಿದ್ದೆ. ಆದರೂ, ನನಗೆ ಕ್ರಿಕೆಟ್‌ನತ್ತ ಗಮನಹರಿಸಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹಿತನೊಂದಿಗೆ ಆತ್ಮಹತ್ಯೆಯ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದೆ. ನಾನು ಭಯಭೀತನಾಗಿದ್ದೆ. ನಿದ್ದೆಯಿಲ್ಲದ ರಾತ್ರಿಗಳು, ಒತ್ತಡ ಮತ್ತು ಸಾರ್ವಜನಿಕರ ಟೀಕೆಗಳು ನನ್ನ ಪ್ರಪಂಚವನ್ನೇ ತಲೆಕೆಳಗಾಗಿ ಮಾಡಿತ್ತು' ಎಂದಿದ್ದಾರೆ.
'ನಾನು ವಿಚ್ಛೇದನ ನಡೆದಾಗ, ಜನರು ನನ್ನನ್ನು ಮೋಸಗಾರ ಎಂದರು. ನಾನು ನನ್ನ ಜೀವನದಲ್ಲಿ ಎಂದಿಗೂ ಮೋಸ ಮಾಡಿಲ್ಲ. ನಾನು ಆ ರೀತಿಯ ವ್ಯಕ್ತಿಯಲ್ಲ. ನೀವು ನನ್ನಷ್ಟು ನಿಷ್ಠಾವಂತ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.
'ನನಗೆ ಇಬ್ಬರು ಸಹೋದರಿಯರಿದ್ದಾರೆ ಮತ್ತು ಬಾಲ್ಯದಿಂದಲೂ ಅವರೊಂದಿಗೆ ಬೆಳೆದಿದ್ದರಿಂದ, ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ನನಗೆ ತಿಳಿದಿದೆ. ಏಕೆಂದರೆ, ನನ್ನ ಪೋಷಕರು ಅವರನ್ನು ಹೇಗೆ ಗೌರವಿಸಬೇಕೆಂದು ನನಗೆ ಕಲಿಸಿದ್ದಾರೆ. ನನ್ನ ಹೆಸರು ಯಾರೊಂದಿಗಾದರೂ ತಳುಕು ಹಾಕಿಕೊಂಡಿದೆ ಎಂದ ಮಾತ್ರಕ್ಕೆ ಆ ಬಗ್ಗೆ ಏನನ್ನೂ ಬರೆಯಬೇಕಾಗಿಲ್ಲ. ವಿಶೇಷವಾಗಿ ವೀಕ್ಷಣೆಗಳನ್ನು ಪಡೆಯಲು ಜನರು ಇದನ್ನು ಮಾಡುವ ಅಗತ್ಯವಿಲ್ಲ' ಎಂದರು.
2020ರ ಡಿಸೆಂಬರ್‌ನಲ್ಲಿ ವಿವಾಹವಾದ ಚಾಹಲ್ ಮತ್ತು ಧನಶ್ರೀ 2025ರ ಫೆಬ್ರುವರಿ 20 ರಂದು ವಿಚ್ಛೇಧನ ಪಡೆದರು. ಇದಕ್ಕು ಮುನ್ನವೇ, ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದಾಗ, ದಂಪತಿ ನಡುವೆ ಏನೋ ಸರಿಯಿಲ್ಲ ಎನ್ನುವ ಊಹಾಪೋಹಗಳು ಎದ್ದಿದ್ದವು.