ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಕ್ರಿಕೆಟ್ ಪಂದ್ಯಾವಳಿಗಳಲ್ಲಿ ದೇಶದ ಹೆಸರನ್ನು ಬಳಸುವುದನ್ನು ನಿಷೇಧಿಸಿದ ಒಂದು ದಿನದ ನಂತರ, ಈಗ WCL ನಲ್ಲಿ ಭವಿಷ್ಯದಲ್ಲಿ ಭಾಗವಹಿಸುವುದರ ಮೇಲೆ ಸಂಪೂರ್ಣ ನಿಷೇಧ ಹೇರಲು ನಿರ್ಧರಿಸಿದೆ. 2025ರ WCL ನಲ್ಲಿ ಇಂಡಿಯಾ ಚಾಂಪಿಯನ್ಸ್ ಎರಡು ಬಾರಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ತಂಡವು ಮೊದಲು ಪಾಕಿಸ್ತಾನ ವಿರುದ್ಧದ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಿಂದ ದೂರಸರಿಯಿತು ಮತ್ತು ನಂತರ ಸೆಮಿಫೈನಲ್‌ನಿಂದಲೂ ಹೊರನಡೆಯಿತು.
ಈ ವಾರದ ಆರಂಭದಲ್ಲಿ ನಡೆದ ತುರ್ತು ಆಡಳಿತ ಮಂಡಳಿಯ ಸಭೆಯಲ್ಲಿ, ಭವಿಷ್ಯದಲ್ಲಿ WCL ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆಯ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು PCB ಪತ್ರಿಕಾ ಪ್ರಕಟಣೆ ತಿಳಿಸಿದೆ. ಭಾರತವು ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸಲು ನಿರ್ಧರಿಸಿದ ನಂತರ WCL ನ ಆಯೋಜಕರನ್ನು ಟೀಕಿಸಿತು ಮತ್ತು ಅವರ ಪತ್ರಿಕಾ ಪ್ರಕಟಣೆಗಳ ವಿಷಯವು 'ಬೂಟಾಟಿಕೆ ಮತ್ತು ಪಕ್ಷಪಾತದಿಂದ ಕೂಡಿದೆ' ಎಂದು ಪಿಸಿಬಿ ಆರೋಪಿಸಿತು.
ಪಹಲ್ಗಾಮ್ ಉಗ್ರ ದಾಳಿಯ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದ್ದು, ಸುರೇಶ್ ರೈನಾ, ಶಿಖರ್ ಧವನ್, ಹರ್ಭಜನ್ ಸಿಂಗ್, ಯೂಸುಫ್ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಹಲವಾರು ಭಾರತೀಯ ತಾರೆಯರು ಪಾಕಿಸ್ತಾನ ವಿರುದ್ಧದ WCL 2025ರ ಆರಂಭಿಕ ಪಂದ್ಯದಿಂದ ಹಿಂದೆ ಸರಿದರು.
ಸುದ್ದಿ ಸಂಸ್ಥೆ ANI ಪ್ರಕಾರ, ದೇಶದ ಹೆಸರನ್ನು ಬಳಸುವ ಹಕ್ಕನ್ನು ಮಂಡಳಿ ಮಾತ್ರ ಹೊಂದಿದ್ದು, ಖಾಸಗಿ ಕ್ರಿಕೆಟ್ ಲೀಗ್‌ಗಳಲ್ಲಿ ದೇಶದ ಹೆಸರನ್ನು ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಎಚ್ಚರಿಸಿದೆ. ಇದಲ್ಲದೆ, 2025ರ WCL ನಲ್ಲಿ ಭಾರತ ಎರಡು ಬಾರಿ ಪಾಕಿಸ್ತಾನವನ್ನು ಬಹಿಷ್ಕರಿಸಿದ್ದರಿಂದ ಪಿಸಿಬಿ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ ಎಂದು ವರದಿ ಹೇಳುತ್ತದೆ. ಇದು ದೇಶದ ಪ್ರತಿಷ್ಠೆಗೆ ಕುಂದುಂಟು ಮಾಡಿದೆ ಎಂದು ಅವರು ಭಾವಿಸಿದ್ದಾರೆ.
'ಕ್ರಿಕೆಟ್ ಲೀಗ್‌ಗಳು ಅಥವಾ ಕಾರ್ಯಕ್ರಮಗಳಿಗೆ 'ಪಾಕಿಸ್ತಾನ' ಎಂಬ ಹೆಸರನ್ನು ಬಳಸಲು ಅನುಮತಿಸುವ ಕಾನೂನುಬದ್ಧ ಅಧಿಕಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾತ್ರ ಹೊಂದಿದೆ. ಯಾವುದೇ ಖಾಸಗಿ ಸಂಸ್ಥೆ ಪಿಸಿಬಿಯ ಅನುಮತಿಯಿಲ್ಲದೆ ಹೆಸರನ್ನು ಬಳಸಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಲೀಗ್ ಅಧಿಕೃತವಾಗಿದ್ದರೆ ಮತ್ತು ಸಂಸ್ಥೆಯು ಖ್ಯಾತಿಯನ್ನು ಹೊಂದಿದ್ದರೆ ಮಾತ್ರ ಪಿಸಿಬಿ ಅನುಮತಿ ನೀಡುತ್ತದೆ' ಎಂದು ವರದಿ ತಿಳಿಸಿದೆ.