ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಬಹು ನಿರೀಕ್ಷಿತ BCCI ಚುನಾವಣೆಯನ್ನು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯಡಿ ನಡೆಸಲು ಕ್ರೀಡಾ ಸಚಿವಾಲಯ ಬಯಸಿದೆ.
ಆದರೆ, ಆ ವೇಳೆಗೆ ನೂತನ ಕಾಯ್ದೆಯ ನಿಯಮಗಳು ಪ್ರಕಟವಾಗದಿದ್ದಲ್ಲಿ ಸುಪ್ರೀಂ ಕೋರ್ಟ್ ಅನುಮೋದಿಸಿದ ಲೋಧಾ ಸಮಿತಿ ಶಿಫಾರಸ್ಸು ಅಡಿಯಲ್ಲಿ ಚುನಾವಣೆ ನಡೆಸಬಹುದು ಎಂದು ಕ್ರೀಡಾ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿದೆ.
ಮುಂದಿನ ಆರು ತಿಂಗಳಲ್ಲಿ ಮಸೂದೆಯ ಪೂರ್ಣ ಪ್ರಮಾಣದ ಅನುಷ್ಠಾನಗೊಳಿಸುವ ಗುರಿಯನ್ನು ಸಚಿವಾಲಯ ಹೊಂದಿದೆ. ಅದರ ವಿವರವಾದ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳನ್ನು ಆದಷ್ಟು ಬೇಗ ತಿಳಿಸಲು ಉದ್ದೇಶಿಸಿದೆ.
ತಾತ್ತ್ವಿಕವಾಗಿ ನೂತನ ಕಾಯ್ದೆಯಡಿ ಚುನಾವಣೆ ನಡೆಸಬೇಕು. ಆ ಸಮಯಕ್ಕೆ ನಿಯಮಾವಳಿಗಳು ಪ್ರಕಟವಾಗದಿದ್ದಲ್ಲಿ ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ಚುನಾವಣೆ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ಒಮ್ಮೆ ನಿಯಮಗಳ ಅಧಿಸೂಚನೆಯ ನಂತರ, ಬಿಸಿಸಿಐ ಸೇರಿದಂತೆ ಎಲ್ಲಾ ಎನ್‌ಎಸ್‌ಎಫ್‌ಗಳು ಅದರ ಮಾನದಂಡಗಳ ಪ್ರಕಾರ ಚುನಾವಣೆಗಳನ್ನು ನಡೆಸಬೇಕಾಗುತ್ತದೆ" ಎಂದು ಮೂಲಗಳು ತಿಳಿಸಿವೆ.
ಲೋಧಾ ಸಮಿತಿಯ ಶಿಫಾರಸ್ಸಿನಂತೆ ಪದಾಧಿಕಾರಿಗಳ ವಯಸ್ಸನ್ನು 70 ವರ್ಷಕ್ಕೆ ಮಿತಿಗೊಳಿಸಿದರೆ, ಹೊಸ ಕಾಯ್ದೆಯು ತಮ್ಮ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯ ಬೈಲಾಗಳು ಮತ್ತು ಕಾನೂನುಗಳು ಅನುಮತಿಸಿದರೆ 70-75 ವಯಸ್ಸಿನವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತದೆ.
ICCಯು ಪದಾಧಿಕಾರಿಗಳಿಗೆ ತನ್ನ ನಿಬಂಧನೆಗಳಲ್ಲಿ ಯಾವುದೇ ವಯಸ್ಸಿನ ಮಿತಿಯನ್ನು ಹಾಕಿಲ್ಲ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರಿಗೆ 70 ವರ್ಷ ವಯಸ್ಸಾಗಿರುವುದರಿಂದ ಅವರ ಅಧಿಕಾರಾವಧಿ ಕೊನೆಗೊಂಡಿದೆ. ಆದರೆ, ಮಂಡಳಿಯು ಇದುವರೆಗೆ ಹಂಗಾಮಿ ಅಧ್ಯಕ್ಷರನ್ನು ಘೋಷಿಸಿಲ್ಲ. ಮಂಡಳಿಯು ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸಿದಾಗ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಚುನಾವಣೆಗಳು ನಡೆಯಲಿವೆ.