ಬೆಂಗಳೂರು: ಐಪಿಎಲ್ 2025 (IPL 2025) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಬರೊಬ್ಬರಿ 3 ತಿಂಗಳ ಬಳಿಕ ಕೊನೆಗೂ ತಂಡ ಮೌನ ಮುರಿದಿದ್ದು, 'ನಿಮ್ಮೊಂದಿಗೆ ನಾವಿದ್ದೇವೆ..' ಎಂದು ಸಂದೇಶ ರವಾನಿಸಿದೆ.
ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವು ಸಾಧಿಸಿತ್ತು. ಮೂಲಕ ದಶಕಗಳ ಟ್ರೋಫಿ ಬರವನ್ನು ಆರ್ ಸಿಬಿ ನೀಗಿಸಿಕೊಂಡಿತ್ತು.
ಇದೇ ಖುಷಿಯಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸಲು ಇಡೀ ತಂಡ ಬೆಂಗಳೂರಿಗೆ ಆಗಮಿಸಿತ್ತು. ಆದರೆ ಇಲ್ಲಿ ಚಿನ್ನಸ್ವಾಮಿ ಅಂಗಣದಲ್ಲಿ ಅಭಿಮಾನಿಗಳ ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿ 11 ಮಂದಿ ಅಸುನೀಗಿದ್ದರು.
ಮೌನಕ್ಕೆ ಶರಣಾಗಿದ್ದ ಆರ್ ಸಿಬಿ
ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ಎಂಬುದು ‘ಕಪ್’ಚುಕ್ಕೆಯಾಗಿತ್ತು. ಈ ದುರ್ಘಟನೆಯ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ.
ಇದೀಗ ಬರೋಬ್ಬರಿ 3 ತಿಂಗಳು ಅಂದರೆ 84 ದಿನಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಒಂದು ಕಾಣಿಸಿಕೊಂಡಿದೆ. ಅದು ಸಹ ಅಭಿಮಾನಿಗಳಿಗಾಗಿ ಹೊಸ ಭರವಸೆಯನ್ನು ನೀಡುವ ಮೂಲಕ ಎಂಬುದು ವಿಶೇಷ.
'ನಿಮ್ಮೊಂದಿಗೆ ನಾವಿದ್ದೇವೆ..'
ಈ ವಿಶೇಷ ಪೋಸ್ಟ್ ಮೂಲಕ ಆರ್ ಸಿಬಿ ಮತ್ತೆ ಅಭಿಮಾನಿಗಳೊಂದಿಗೆ ಕೈ ಜೋಡಿಸಿದ್ದು, 'ಇಂದು ನಾವು ಮರಳಿದ್ದೇವೆ. ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತಾ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ನಿಮ್ಮೊಂದಿಗೆ ನಾವಿದ್ದೇವೆ.. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ ಎಂದು ಹೇಳಿದೆ.
ಪೋಸ್ಟ್ ನಲ್ಲೇನಿದೆ?
'ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳಕಾಲ ಕಳೆದಿದೆ. ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ದವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ'.
ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ ಆರ್‌ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ. ಇಂದು ನಾವು ಮರಳಿದ್ದೇವೆ. ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತಾ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ.
ಆರ್‌ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು ಪೋಸ್ಟ್ ಮಾಡಿದೆ.
ಆರ್ ಸಿಬಿ ಕೇರ್ಸ್
ಈ ಪೋಸ್ಟ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಭಿಮಾನಿಗಳಿಗಾಗಿ ವಿಶೇಷ ಕಾಳಜಿವಹಿಸಲು ನಿರ್ಧರಿಸಿದೆ. ಇದಕ್ಕಾಗಿ ಟ್ರಸ್ಟ್ವೊಂದನ್ನು ರೂಪಿಸುವ ಸಾಧ್ಯತೆಯಿದ್ದು, ಈ ಮೂಲಕ ಕಾಲ್ತುಳಿತದಿಂದ ಮೃತಪಟ್ಟಿರುವ ಅಭಿಮಾನಿಗಳ ಕುಟುಂಬಕ್ಕೆ ನೆರವಾಗುವ ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.