ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2025-2028ರ ಅವಧಿಗೆ 450 ಕೋಟಿ ರೂ. ಮೌಲ್ಯದ ಪ್ರಾಯೋಜಕತ್ವ ಒಪ್ಪಂದದ ಮೇಲೆ ಕಣ್ಣಿಟ್ಟಿದೆ ಎಂದು ವರದಿಯಾಗಿದೆ. ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ ಅಂಗೀಕಾರವಾದ ನಂತರ ಡ್ರೀಮ್ 11 ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದ ನಂತರ ಮಂಡಳಿಯು ಹೊಸ ಪ್ರಾಯೋಜಕರ ಹುಡುಕಾಟದಲ್ಲಿದೆ. ಏಷ್ಯಾ ಕಪ್ 2025ರ ವೇಳೆಗೆ ಬಿಸಿಸಿಐ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳುವ ಸಾಧ್ಯತೆ ಕಡಿಮೆಯಾದರೂ, ಮಹಿಳಾ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗುವ ಸೆಪ್ಟೆಂಬರ್ 30ರ ಹೊತ್ತಿಗೆ ಒಪ್ಪಂದವನ್ನು ಅಂತಿಮಗೊಳಿಸುವ ವಿಶ್ವಾಸ ಬಿಸಿಸಿಐ ಹೊಂದಿದೆ ಎಂದು ವರದಿಯಾಗಿದೆ.
NDTV ಪ್ರಕಾರ, 2025 ರಿಂದ 2028ರ ನಡುವೆ ನಡೆಯಲಿರುವ 140 ಪಂದ್ಯಗಳಿಗೆ ಬಿಸಿಸಿಐ ಪ್ರಾಯೋಜಕರ ಹುಡುಕಾಟದಲ್ಲಿದೆ. ಡ್ರೀಮ್ 11 ಜೊತೆಗಿನ ಒಪ್ಪಂದವು 358 ಕೋಟಿ ರೂ. ಮೌಲ್ಯದ್ದಾಗಿತ್ತು. ಆದರೆ, ಹೊಸ ಒಪ್ಪಂದವು ಸುಧಾರಿತ ಒಪ್ಪಂದವಾಗಿದ್ದು, ಇದು ACC ಮತ್ತು ICC ಆಯೋಜಿಸುವ ದೇಶೀಯ, ದ್ವಿಪಕ್ಷೀಯ, ಬಹು-ತಂಡ ಪಂದ್ಯಾವಳಿಗಳನ್ನು ಒಳಗೊಂಡಿರುತ್ತದೆ.
'ಬಿಸಿಸಿಐ ಪ್ರತಿ ದ್ವಿಪಕ್ಷೀಯ ಪಂದ್ಯಕ್ಕೆ 3.5 ಕೋಟಿ ರೂ. ಮತ್ತು ಐಸಿಸಿ ಮತ್ತು ಎಸಿಸಿ ಪಂದ್ಯಗಳಿಗೆ 1.5 ಕೋಟಿ ರೂ. ಗುರಿಯನ್ನು ನಿಗದಿಪಡಿಸಿದೆ. ಇದು ಡ್ರೀಮ್ 11 ಪಾವತಿಸಿದ್ದಕ್ಕಿಂತ ಹೆಚ್ಚು ಆದರೆ, ಬೈಜುಸ್‌ನಿಂದ ಹಿಂದೆ ಪಡೆಯುತ್ತಿದ್ದಕ್ಕಿಂತ ಕಡಿಮೆ' ಎಂದು ವರದಿ ಹೇಳಿದೆ.
2023 ರಲ್ಲಿ, ಭಾರತ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕತ್ವ ಒಪ್ಪಂದವನ್ನು 358 ಕೋಟಿ ರೂ.ಗಳಿಗೆ ಅಥವಾ ಪ್ರತಿ ತವರಿನ ಪಂದ್ಯಕ್ಕೆ 3 ಕೋಟಿ ರೂ. ಮತ್ತು ವಿದೇಶದ ಪಂದ್ಯಗಳಿಗೆ 1 ಕೋಟಿ ರೂ.ಗಳಿಗೆ ಮಾಡಿಕೊಳ್ಳಲಾಗಿತ್ತು. ಆದರೆ, ಬೈಜು ಪಡೆದಿದ್ದ ಒಪ್ಪಂದವನ್ನು ಡ್ರೀಮ್11 ಪಡೆದಿತ್ತು. ಇದೀಗ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ರಿಯಲ್-ಮನಿ ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ. ಇದು ಕಂಪನಿಗಳು ಜಾಹೀರಾತುಗಳನ್ನು ನೀಡುವುದನ್ನು ಸಹ ನಿಷೇಧಿಸುತ್ತದೆ.
'ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅಂಗೀಕಾರವಾದ ನಂತರ ಬಿಸಿಸಿಐ ಮತ್ತು ಡ್ರೀಮ್ 11 ತಮ್ಮ ಸಂಬಂಧವನ್ನು ಸ್ಥಗಿತಗೊಳಿಸುತ್ತಿವೆ. ಭವಿಷ್ಯದಲ್ಲಿ ಅಂತಹ ಯಾವುದೇ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳದಂತೆ ಬಿಸಿಸಿಐ ಗಮನ ಹರಿಸುತ್ತದೆ' ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.