ರಾಂಚಿಯಲ್ಲಿ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವೇಗಿ ಹರ್ಷಿತ್ ರಾಣಾ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ.
ಹರ್ಷಿತ್ ರಾಣಾ ಅವರು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ. ಇದು ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಬ್ಯಾಟ್ಸ್‌ಮನ್ ಔಟ್ ಆದ ನಂತರ ಅವರನ್ನು ಅವಮಾನಿಸುವ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ' ಸಂಬಂಧಿಸಿದೆ.
ದಕ್ಷಿಣ ಆಫ್ರಿಕಾದ ಇನಿಂಗ್ಸ್‌ನ 22ನೇ ಓವರ್‌ನಲ್ಲಿ ಪ್ರೋಟಿಯಸ್ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರನ್ನು ಔಟ್ ಮಾಡಿದ ನಂತರ ರಾಣಾ ಡ್ರೆಸ್ಸಿಂಗ್ ಕೋಣೆಯ ಕಡೆಗೆ ಸನ್ನೆ ಮಾಡಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.
ಪಂದ್ಯದ ಸಮಯದಲ್ಲಿ ವೇಗಿ ಮಾಡಿದ ಸನ್ನೆಯಿಂದಾಗಿ ಬ್ಯಾಟ್ಸ್‌ಮನ್ ಅನ್ನು ಕೆರಳಿಸುವುದು ಮತ್ತು ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ, ವೇಗಿಗೆ ಎಚ್ಚರಿಕೆಯಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಕಳೆದ 24 ತಿಂಗಳಲ್ಲಿ ಹರ್ಷಿತ್ ರಾಣಾ ಮಾಡಿದ ಮೊದಲ ಅಪರಾಧ ಇದಾಗಿದ್ದು ಮತ್ತು ಅಪರಾಧವನ್ನು ಅವರು ಒಪ್ಪಿಕೊಂಡಿದ್ದಾರೆ. ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್‌ಸನ್ ಸೂಚಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
'ರಾಣಾ ಅಪರಾಧವನ್ನು ಒಪ್ಪಿಕೊಂಡರು ಮತ್ತು ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್ಸನ್ ಪ್ರಸ್ತಾಪಿಸಿದ ಶಿಕ್ಷೆಯನ್ನು ಸ್ವೀಕರಿಸಿದರು. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ' ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಮೈದಾನದಲ್ಲಿರುವ ಅಂಪೈರ್‌ಗಳಾದ ಜಯರಾಮನ್ ಮದನಗೋಪಾಲ್ ಮತ್ತು ಸ್ಯಾಮ್ ನೊಗಾಜ್ಸ್ಕಿ, ಮೂರನೇ ಅಂಪೈರ್ ರಾಡ್ ಟಕರ್ ಮತ್ತು ನಾಲ್ಕನೇ ಅಂಪೈರ್ ರೋಹನ್ ಪಂಡಿತ್ ಆರೋಪವನ್ನು ಹೊರಿಸಿದರು.
ಲೆವೆಲ್ 1 ಉಲ್ಲಂಘನೆಗೆ ಕನಿಷ್ಠ ವಾಗ್ದಂಡನೆ, ಗರಿಷ್ಠ ಆಟಗಾರನ ಪಂದ್ಯ ಶುಲ್ಕದ ಶೇ 50 ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್‌ಗಳು ಸೇರಿವೆ.
ಆತಿಥೇಯರು ದಕ್ಷಿಣ ಆಫ್ರಿಕಾವನ್ನು ಸರಣಿಯ ಆರಂಭಿಕ ಪಂದ್ಯದಲ್ಲಿ 17 ರನ್‌ಗಳಿಂದ ಸೋಲಿಸಿ 1-0 ಮುನ್ನಡೆ ಸಾಧಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ, ವಿರಾಟ್ ಕೊಹ್ಲಿ ಅವರ ಅದ್ಭುತ 135 ರನ್ ಮತ್ತು ರೋಹಿತ್ ಶರ್ಮಾ (57) ಮತ್ತು ಕೆಎಲ್ ರಾಹುಲ್ (60) ಅವರ ಉತ್ತಮ ಅರ್ಧಶತಕಗಳ ಕಾರಣದಿಂದಾಗಿ 349/8 ಸ್ಕೋರ್ ಗಳಿಸಿತು.