ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ತೊಂದರೆ ಕೊಡಲು ಪ್ರಯತ್ನಿಸುವವರ ವಿರುದ್ಧ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕಿಡಿಕಾರಿದ್ದಾರೆ. ಅನುಭವಿ ಆಟಗಾರರ ಭವಿಷ್ಯದ ಸುತ್ತ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ ಸಂದರ್ಶನವೊಂದರಲ್ಲಿ, ಸಮಸ್ಯೆ ಸೃಷ್ಟಿಸುವವರಿಗೆ' ಭಾರತದ ಮಾಜಿ ತರಬೇತುದಾರ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಏಕದಿನ ಆಟಗಾರರಾದ ಕೊಹ್ಲಿ ಮತ್ತು ರೋಹಿತ್ ಅವರ ವೃತ್ತಿಜೀವನ ಮತ್ತು ಖ್ಯಾತಿಯೊಂದಿಗೆ "ಗೊಂದಲ ಸೃಷ್ಟಿಸಬೇಡಿ ಎಂದು ಕೆಲವು ಟೀಕಾಕಾರರಿಗೆ ಶಾಸ್ತ್ರೀ ಹೇಳಿದ್ದಾರೆ. ಅವರು ಕೊಹ್ಲಿಯೊಂದಿಗೆ ತಂದೆ-ಮಗನಂತಹ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ರೋಹಿತ್ ಜೊತೆಗೂ ನಿಕಟವಾಗಿ ಕೆಲಸ ಮಾಡಿದ್ದಾರೆ.
ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಪಂದ್ಯದ ದೈತ್ಯ ಆಟಗಾರರು. ಆ ಮಟ್ಟದ ಆಟಗಾರರ ಕುರಿತು ನೀವು ಹೇಳಿಕೆ ನೀಡಬೇಡಿ ಎಂದು ಸಂದರ್ಶನದಲ್ಲಿ ಹೇಳಿದರು. ವಿಶೇಷವಾಗಿ ಭಾರತದ ಏಕದಿನ ವಿಶ್ವಕಪ್ ಯೋಜನೆಗಳ ಹಿನ್ನೆಲೆಯಲ್ಲಿ ಇಬ್ಬರು ದಿಗ್ಗಜ ಆಟಗಾರರ ಸುತ್ತ ವ್ಯಾಪಕ ಚರ್ಚೆ ನಡೆಯುತ್ತಿದೆ.
ಈ ಆಟಗಾರರ ಸುತ್ತ ಏನು ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರವಿಶಾಸ್ತ್ರಿ, ಕೆಲವರು ಹಾಗೆ ಮಾಡುತ್ತಿದ್ದಾರೆ. ನಾನು ಹೇಳುವುದಿಷ್ಟೇ. ಈ ಇಬ್ಬರೂ ಸರಿಯಾಗಿ ನಿಂತರೆ, ಗೊಂದಲ ಉಂಟು ಮಾಡುತ್ತಿರುವವರೆಲ್ಲರೂ ನಾಪತ್ತೆಯಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಶಾಸ್ತ್ರಿ ಅವರ ಹೇಳಿಕೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತು ತಂಡದ ಆಯ್ಕೆದಾರರಿಗೆ ನೇರ ಸಂದೇಶವೆಂದು ಅರ್ಥೈಸಲಾಗುತ್ತಿದೆ. ಅವರಿಗೆ ತೊಂದರೆ ಕೊಡುವ ಬದಲು ಬೆಂಬಲಿಸುವಂತೆ ಒತ್ತಾಯಿಸಿದ್ದಾರೆ.
2027 ರಲ್ಲಿ ನಡೆಯಲಿರುವ ODI ವಿಶ್ವಕಪ್ ನಲ್ಲಿ ಕೊಹ್ಲಿ ಮತ್ತು ರೋಹಿತ್ ಆಡಲಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಅಭ್ಯಾಸದ ಕೊರತೆಯಿಂದ ಅವರು ತಂಡ ಸೇರಲು ಕಷ್ಟಕರವಾಗಬಹುದು ಎಂದು ಕೆಲವರು ಟೀಕಿಸುತ್ತಿದ್ದಾರೆ.
ಫಿಟ್ ಆಗಿ ಉಳಿಯಲು ಇಬ್ಬರೂ ಆಟಗಾರರು ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ಆಡಲು ಪುನರಾರಂಭಿಸುವಂತೆ ಒತ್ತಾಯಿಸಲಾಗಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ರೋಹಿತ್ ಒಪ್ಪಿಕೊಂಡರೂ, ಕೊಹ್ಲಿ ಒಪ್ಪಿಕೊಂಡಿರಲಿಲ್ಲ, ಆರಂಭದಲ್ಲಿ ದೇಶೀಯ ಕ್ರಿಕೆಟ್‌ಗೆ ಮರಳಲು ನಿರಾಕರಿಸಿದ್ದರು. ಆದರೆ ಆಯ್ಕೆದಾರರ ಮನವೊಲಿಕೆ ನಂತರ ಒಪ್ಪಿಕೊಂಡಿದ್ದಾರೆ.