ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಅವರನ್ನು ಆಯ್ಕೆ ಮಾಡಲು ಬಯಸಿದರೆ, ಅವರು ಆವೃತ್ತಿಯ ಅರ್ಧಕ್ಕಿಂತ ಹೆಚ್ಚು ಪಂದ್ಯಗಳಿಂದ ಹೊರಗುಳಿಯಬಹುದು ಎಂದು ವರದಿಯೊಂದು ತಿಳಿಸಿದೆ. ಸದ್ಯ ಬ್ರಿಸ್ಬೇನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 2ನೇ ಆಶಸ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ಆಡುತ್ತಿರುವ ಇಂಗ್ಲಿಸ್, 2 ಕೋಟಿ ರೂ. ಮೂಲ ಬೆಲೆಗೆ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. 30 ವರ್ಷದ ಇಂಗ್ಲಿಸ್ ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಫೈನಲ್ ತಲುಪಲು ಸಹಾಯ ಮಾಡಿದರು. ಆದರೆ, ಪಂಜಾಬ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೋಲು ಕಂಡಿತು.
ಕ್ರಿಕ್‌ಬಜ್ ವರದಿ ಪ್ರಕಾರ, ಇಂಗ್ಲಿಸ್ ಐಪಿಎಲ್ 2026 ರಲ್ಲಿ ಕೇವಲ ಶೇ 25 ರಷ್ಟು ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ. 'ಅವರು (ಇಂಗ್ಲಿಸ್) ನಾಲ್ಕು ಪಂದ್ಯಗಳಿಗಿಂತ ಹೆಚ್ಚು ಪಂದ್ಯಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಮಂಡಳಿಯ ಮೂಲಕ ಫ್ರಾಂಚೈಸಿಗಳಿಗೆ ತಿಳಿಸಿದ್ದಾರೆ' ಎಂದು ವರದಿ ತಿಳಿಸಿದೆ.
ಪಿಬಿಕೆಎಸ್ ಇಂಗ್ಲಿಸ್ ಅವರನ್ನು ಉಳಿಸಿಕೊಳ್ಳಲು ಬಯಸಿತ್ತು. ಆದರೆ, ಐಪಿಎಲ್ 2026 ರ ಸೀಸನ್ ಅವರ ವಿವಾಹ ಯೋಜನೆಗಳಿಗೆ ಅಡ್ಡಿಯಾಗಬಹುದು ಎಂದು ಆಟಗಾರ ತಿಳಿಸಿದ ನಂತರ ಅವರನ್ನು ಕೈಬಿಡಲು ನಿರ್ಧರಿಸಿತು. ಇಂಗ್ಲಿಸ್ ಹೊರತುಪಡಿಸಿ, ಇನ್ನೂ ನಾಲ್ಕು ವಿದೇಶಿ ಆಟಗಾರರು ಈ ಆವೃತ್ತಿಗೆ ಸೀಮಿತ ಲಭ್ಯತೆಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
'ಆಸ್ಟ್ರೇಲಿಯಾದ ಆಷ್ಟನ್ ಅಗರ್ (ಶೇ 65) ಮತ್ತು ವಿಲಿಯಂ ಸದರ್ಲ್ಯಾಂಡ್ (ಶೇ 80), ನ್ಯೂಜಿಲೆಂಡ್‌ನ ಆಡಮ್ ಮಿಲ್ನೆ (ಶೇ 95) ಮತ್ತು ದಕ್ಷಿಣ ಆಫ್ರಿಕಾದ ರಿಲೀ ರೊಸ್ಸೌ (ಶೇ 20) ಈ ಆವೃತ್ತಿಯಲ್ಲಿ ತಮ್ಮ ಭಾಗವಹಿಸುವಿಕೆಯ ಪ್ರಮಾಣವನ್ನು ಸೂಚಿಸಿದ್ದಾರೆ' ಎಂದು ವರದಿ ಹೇಳಿದೆ.
ಈ ಹರಾಜಿಗೂ ಮುನ್ನ ಬಿಡುಗಡೆಯಾದ ಹಲವು ಆಟಗಾರರು ಗರಿಷ್ಠ ಬೆಲೆ 2 ಕೋಟಿ ರೂ. ಆಗಿದೆ. ಇದರಲ್ಲಿ ಶ್ರೀಲಂಕಾದ ವೇಗಿ ಮಥೀಷಾ ಪತಿರಾನ ಸೇರಿದ್ದಾರೆ. ಅವರನ್ನು ಕಳೆದ ವರ್ಷ ಸಿಎಸ್‌ಕೆ 13 ಕೋಟಿ ರೂ.ಗಳಿಗೆ ಉಳಿಸಿಕೊಂಡಿತ್ತು. ಆದರೆ, ಗಾಯದ ಸಮಸ್ಯೆಗಳ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 8.75 ಕೋಟಿ ರೂ.ಗೆ ಖರೀದಿಸಿದ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಕೂಡ ಕಳೆದ ಆವೃತ್ತಿಯಲ್ಲಿನ ಕಳಪೆ ಪ್ರದರ್ಶನದಿಂದಾಗಿ ಬಿಡುಗಡೆ ಮಾಡಿತ್ತು.
ಭಾರತೀಯ ಆಟಗಾರರಲ್ಲಿ, ವೆಂಕಟೇಶ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಇಬ್ಬರೂ 2 ಕೋಟಿ ರೂ. ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 11 ಕೋಟಿ ರೂ.ಗೆ ಉಳಿಸಿಕೊಂಡಿದ್ದ ಬಿಷ್ಣೋಯ್ ಅವರನ್ನು ಫ್ರಾಂಚೈಸಿಯೊಂದಿಗೆ ನಾಲ್ಕು ಆವೃತ್ತಿಗಳನ್ನು ಕಳೆದ ನಂತರ ಕೈಬಿಡಲಾಯಿತು.