ದುಬೈ: ಪಾಕಿಸ್ತಾನದ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾನುವಾರ ಇಲ್ಲಿ ನಡೆದ 50 ಓವರ್‌ಗಳ ಪುರುಷರ U-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 347 ರನ್ ಗಳಿಸುವ ಮೂಲಕ ಭಾರತಕ್ಕೆ 348 ರನ್ ಗುರಿ ನೀಡಿದೆ.
ಈ ಟೂರ್ನಿಯಲ್ಲಿ ತಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ಒಬ್ಬರಾದ ಮಿನ್ಹಾಸ್, 113 ಎಸೆತಗಳಲ್ಲಿ 172 ರನ್ ಗಳಿಸಿ ತಂಡಕ್ಕೆ ನೆರವಾದರು. ಈ ಪಂದ್ಯಾವಳಿಯಲ್ಲಿ ಇದು ಅವರ ಎರಡನೇ ಶತಕವಾಗಿದೆ. ಅದೇ ಮೈದಾನದಲ್ಲಿ ನಡೆದ ಗುಂಪು ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 90 ರನ್‌ಗಳಿಂದ ಸೋತಿತ್ತು.
ಸೆಮಿಫೈನಲ್‌ನಲ್ಲಿ ಕಳೆದ ಆವೃತ್ತಿಯ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಎಂಟು ವಿಕೆಟ್‌ಗಳ ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದ ಪಾಕಿಸ್ತಾನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿತು.
ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಅಜೇಯ ಅರ್ಧಶತಕದೊಂದಿಗೆ ಪ್ರಮುಖ ಪಾತ್ರ ವಹಿಸಿದ್ದ ಮಿನ್ಹಾಸ್, ಪ್ರತಿಯೊಬ್ಬ ಬೌಲರ್‌ಗಳಿಗೂ ಬೆವರಿಳಿಯುವಂತೆ ಮಾಡಿದರು. ಆದರೆ, ವಿಶೇಷವಾಗಿ ಹೊಸ ಚೆಂಡಿನ ಬೌಲರ್‌ಗಳಾದ ಕಿಶನ್ ಸಿಂಗ್ ಮತ್ತು ದೀಪೇಶ್ ದೇವೇಂದ್ರನ್ ಅವರ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದರು. ಪಾಕಿಸ್ತಾನದ ಟಿ20 ಆಟಗಾರ್ ಅರ್ಫಾತ್ ಮಿನ್ಹಾಸ್ ಅವರ ಕಿರಿಯ ಸದೋದರ ಇವರಾಗಿದ್ದಾರೆ.
17 ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳಿಂದ ಕೂಡಿದ ಇನಿಂಗ್ಸ್‌ನಲ್ಲಿ ಮಿನ್ಹಾಸ್, ದೇವೇಂದ್ರನ್ ಎಸೆದ 29ನೇ ಓವರ್‌ನಲ್ಲಿ ಒಂದು ಬೌಂಡರಿಯೊಂದಿಗೆ 71 ಎಸೆತಗಳಲ್ಲಿ ಶತಕ ಗಳಿಸಿದರು. ಆರಂಭಿಕ ಗುಂಪು ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಅಜೇಯ 177 ರನ್ ಗಳಿಸಿದ ಮಿನ್ಹಾಸ್ ಅವರ ಎರಡನೇ ಶತಕ ಇದಾಗಿದೆ. ಆದರೆ, ದ್ವಿಶತಕ ಗಳಿಸಲು ಎದುರು ನೋಡುತ್ತಿದ್ದ ಮಿನ್ಹಾಸ್ ಅವರನ್ನು ದೇವೇಂದ್ರನ್ ಔಟ್ ಮಾಡಿದರು.
19 ವರ್ಷದ ಈ ಆಟಗಾರ, ಭಾರತದ ಅಭಿಗ್ಯಾನ್ ಕುಂಡು ಮತ್ತು ದಕ್ಷಿಣ ಆಫ್ರಿಕಾದ ಜೋರಿಚ್ ವ್ಯಾನ್ ಶಾಲ್ಕ್‌ವೈಕ್ ಅವರಂತಹ ಆಟಗಾರರ 200 ಪ್ಲಸ್ ಕ್ಲಬ್‌ಗೆ ಸೇರ್ಪಡೆಗೊಂಡರು.
ಭಾರತದ ಪರ ದೀಪೇಶ್ ದೇವೇಂದ್ರನ್ 3 ವಿಕೆಟ್ ಪಡೆದರೆ, ಹೆನಿಲ್ ಪಟೇಲ್ 2, ಕನಿಷ್ಕ್ ಚೌಹಾಣ್ 1 ಮತ್ತು ಖಿಲಾನ್ ಪಟೇಲ್ 2 ವಿಕೆಟ್ ಪಡೆದರು.
1989ರಲ್ಲಿ ಟೂರ್ನಮೆಂಟ್ ಪ್ರಾರಂಭವಾದಾಗಿನಿಂದ ಭಾರತ ದಾಖಲೆಯ ಎಂಟು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. 2012ರ ಆವೃತ್ತಿಯಲ್ಲಿ ಪಂದ್ಯವು ಟೈನಲ್ಲಿ ಕೊನೆಗೊಂಡಾಗ ಅವರು ಪಾಕಿಸ್ತಾನದೊಂದಿಗೆ ಜಂಟಿ ವಿಜೇತರಾಗಿದ್ದರು. ಇದನ್ನು ಹೊರತುಪಡಿಸಿ ಪಾಕ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.