2025ನೇ ವರ್ಷವು ಭಾರತದ ಕ್ರಿಕೆಟ್ ಪಾಲಿಗೆ ಶ್ರೇಷ್ಠ ವರ್ಷಗಳಲ್ಲಿ ಒಂದಾಗಿಯೇ ನೆನಪಿನಲ್ಲಿ ಉಳಿಯುತ್ತದೆ. ಪುರುಷರ ತಂಡವು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತನ್ನದೇ ಆದ ವಿರೋಧವನ್ನು ಹೊಂದಿದ್ದರೂ, ವೈಟ್ ಬಾಲ್ ಪ್ರದರ್ಶನವು ತಂಡಕ್ಕೆ ಹೊಸ ಹುರುಪನ್ನು ನೀಡಿದೆ. ಇದರೊಂದಿಗೆ ಮಹಿಳೆಯರು ತಮ್ಮ ಮೊದಲ ಏಕದಿನ ವಿಶ್ವಕಪ್ ಅನ್ನು ಗೆಲ್ಲುವ ಮೂಲಕ ಭಾರತ ತಂಡ ಇತಿಹಾಸ ಸೃಷ್ಟಿಸಿದೆ ಮತ್ತು ಅಂಧರ T20 ವಿಶ್ವಕಪ್‌ನಲ್ಲಿಯೂ ಭಾರತದ ಮಹಿಳಾ ತಂಡವು ಮೊದಲ ವಿಜಯವನ್ನು ಆಚರಿಸಿತು.
ನವೆಂಬರ್ 2, 2025 ರಂದು ನವಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ತಂಡವು ತಮ್ಮ ಮೊದಲ ಐಸಿಸಿ ಮಹಿಳಾ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಇತಿಹಾಸ ನಿರ್ಮಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಶೆಫಾಲಿ ವರ್ಮಾ ಅವರ ಅದ್ಭುತ ಅರ್ಧಶತಕದ ನೆರವಿನಿಂದ 299 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿತು. ದಕ್ಷಿಣ ಆಫ್ರಿಕಾವು 246 ರನ್‌ಗಳಿಸುವಲ್ಲಿ ಯಶಸ್ವಿಯಾಯಿತು. ಇದರಿಂದ ಭಾರತಕ್ಕೆ ಐತಿಹಾಸಿಕ ಗೆಲುವು ಸಿಕ್ಕಿತು. ದೀಪ್ತಿ ಶರ್ಮಾ ಪ್ಲೇಯರ್ ಆಫ್ ದ ಟೂರ್ನಿಮೆಂಟ್ ಪ್ರಶಸ್ತಿ ಪಡೆದರು.
ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್ ಅಂತರದಿಂದ ಸೋಲಿಸಿದ ಭಾರತದ ಪುರುಷರ ತಂಡವು ಮೂರನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತವು ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿಯಿತು. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡವಾಯಿತು. ರೋಹಿತ್ ಶರ್ಮಾ ಫೈನಲ್‌ನಲ್ಲಿ 76 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು ಮತ್ತು ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿ ಪಡೆದರು. ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್‌ಗಳನ್ನು ಪಡೆದು ಪ್ರಮುಖ ಬೌಲರ್‌ಗಳಾಗಿದ್ದರು.
ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಒಂಬತ್ತನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕುಲದೀಪ್ ಯಾದವ್ ನಾಲ್ಕು ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದರು. ಪಾಕಿಸ್ತಾನ ತಂಡವನ್ನು ಭಾರತ ಕೇವಲ 146 ರನ್‌ಗಳಿಗೆ ಕಟ್ಟಿಹಾಕಿತು. ತಿಲಕ್ ವರ್ಮಾ ಅವರ ಅಜೇಯ 69 ರನ್‌ಗಳ ನೆರವಿನಿಂದ ಭಾರತ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಭಾರತವು ಟೂರ್ನಿಯಾದ್ಯಂತ ಅಜೇಯ ಓಟವನ್ನು ಮುಂದುವರಿಸಿತ್ತು. ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿತು. ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದ್ದರಿಂದ ಇದುವರೆಗೂ ಟ್ರೋಫಿ ಭಾರತಕ್ಕೆ ಸಿಕ್ಕಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 52 ಏಕದಿನ ಶತಕಗಳೊಂದಿಗೆ ಸಚಿನ್ ತೆಂಡೂಲ್ಕರ್ ಅವರ ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹಿಂದಿಕ್ಕಿದರು ಮತ್ತು ಸಚಿನ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿದರು.
ಭಾರತೀಯ ಮಹಿಳಾ ಅಂಧರ ತಂಡವು ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ನೇಪಾಳವನ್ನು ಸೋಲಿಸಿ ತಮ್ಮ ಮೊದಲ ಟಿ20 ವಿಶ್ವಕಪ್ ಗೆದ್ದಿತು. ಮೊದಲು ಬೌಲಿಂಗ್ ಮಾಡಿದ ಭಾರತ, ನೇಪಾಳವನ್ನು 114/5ಕ್ಕೆ ಸೀಮಿತಗೊಳಿಸಿತು ಮತ್ತು ಕೇವಲ 12 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು. ಈ ಗೆಲುವು ದೇಶದಾದ್ಯಂತ ಅಂಗವಿಕಲ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ.