News wrap 12-02-2026| ನಾನು ರಾಜಕಾರಣ ಮಾಡೋಕೇ ದಿಲ್ಲಿಗೆ ಬಂದಿರೋದು- DKS; ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್; ಶಾಸಕ ಆರಗ ಜ್ಞಾನೇಂದ್ರ PA ಬಂಧನ

News wrap of the day
ಸುದ್ದಿ ಮುಖ್ಯಾಂಶಗಳುonline desk

1. ರಾಹುಲ್ ಗಾಂಧಿ ಫೋಟೋ ಎಡಿಟ್: ಶಾಸಕ ಆರಗ ಜ್ಞಾನೇಂದ್ರ PA ಬಂಧನ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದಡಿ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ಹಾಗೂ ಶಾಸಕರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಬಂಧಿತ ಆರೋಪಿ. ಶಿವಮೊಗ್ಗದ ಜೆ.ಎಂ.ಎಫ್.ಸಿ ನ್ಯಾಯಾಲಯ ಆರೋಪಿಗೆ ಫೆಬ್ರವರಿ 24, 2026 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ರಾಜೇಶ್ ಹಿರಿಮನೆ ರಾಹುಲ್ ಗಾಂಧಿ ಅವರ ಮುಖದ ಅರ್ಧ ಭಾಗ ಹಾಗೂ ಪಾಕಿಸ್ತಾನ ಸೇನೆಯ ಸಮವಸ್ತ್ರ ಧರಿಸಿದ ಅಧಿಕಾರಿ ‘ಅಸಿಮ್’ ಫೋಟೋವನ್ನು ಎಡಿಟ್ ಮಾಡಿ ಒಂದಕ್ಕೊಂದು ಸೇರಿಸಿದ್ದರು. ಈ ವಿವಾದಾತ್ಮಕ ಚಿತ್ರಕ್ಕೆ “ONE AGENDA” ಎಂಬ ಟ್ಯಾಗ್ ಲೈನ್ ನೀಡಿ ಫೇಸ್‌ಬುಕ್‌ನಲ್ಲಿ ಹರಿಬಿಡಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಆಕ್ಷೇಪಾರ್ಹ ಪೋಸ್ಟ್ ಗಮನಿಸಿದ ಹೊಸನಗರ-ನಗರ ಪೊಲೀಸರು, ಮೇ 20, 2025 ರಂದೇ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 353(2) ರ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

2. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಖಾಲಿ, ಪಾಪರ್ ಸರ್ಕಾರ- ಆರ್. ಅಶೋಕ್ ಕಿಡಿ!

ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖಾಲಿಯಾಗಿದ್ದು, ಇದು ಪಾಪರ್‌ ಸರ್ಕಾರದ ಸಂಕೇತವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಕಿಡಿ ಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಔಷಧಿ ಖರೀದಿಸಲು ಹಣವಿಲ್ಲ. ಯಾವುದೇ ಔಷಧಿ ದಾಸ್ತಾನಿಲ್ಲ. ಈ ಮೂಲಕ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ. ಆಸ್ಪತ್ರೆಗಳ ನಿರ್ವಹಣೆಯ ಹಣದಿಂದ ಔಷಧಿ ಖರೀದಿಸುವ ದುಸ್ಥಿತಿಗೆ ಸರ್ಕಾರ ಬಂದಿದೆ. ಸಾಲ ಮಾಡಿ ಔಷಧಿ ಖರೀದಿಸುವ ಸ್ಥಿತಿ ಬಂದಿದೆ ಮಾರ್ಚ್‌ಗೆ ಟೆಂಡರ್‌ಗೆ ಅಂತಿಮಗೊಳಿಸಲು ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಅಂದರೆ ಮೇ, ಜೂನ್‌ವರೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಬಾರದೇ ಇದ್ದರೆ ರೋಗಿಗಳು ಸಾಯಬೇಕಾಗುತ್ತದೆ ಎಂದು ಅಶೋಕ್ ಹೇಳಿದ್ದಾರೆ.

3. ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜ್​ಗೆ ಬಿಗ್ ಶಾಕ್​​; ಸುಪ್ರೀಂ ಕೋರ್ಟ್ ನಲ್ಲೂ ಜಾಮೀನು‌ ಅರ್ಜಿ ವಜಾ

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರಿಗೆ ಗುರುವಾರ ಸುಪ್ರೀಂ ಕೋರ್ಟ್ ಸಹ ಬಿಗ್ ಶಾಕ್ ನೀಡಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಕಳೆದ ಮಂಗಳವಾರ ನಿರೀಕ್ಷಣಾ ಜಾಮೀನು ಕೋರಿ ಭೈರತಿ ಬಸವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ ವಜಾಗೊಳಿಸಿತ್ತು. ಬಳಿಕ ಭೈರತಿ ಬಸವರಾಜ್ ಅವರು ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸ್ಥಳೀಯ ಕೋರ್ಟ್ ನಲ್ಲೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವಂತೆ ಹೇಳಿ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

4. ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಬ್ರೇಕ್

ಹೆಬ್ಬಾಳ- ಸರ್ಜಾಪುರ ಮೆಟ್ರೋ ಯೋಜನೆಗೆ ಸಂಬಂಧಿಸಿದ ಡಿಪಿಆರ್ ಅನುಮೋದನೆಗೆ ಕೇಂದ್ರ ಸರ್ಕಾರ ನಿರಾಕರಿಸಿದೆ. ಹೆಬ್ಬಾಳ-ಸರ್ಜಾಪುರ ಮೆಟ್ರೋ (ರೆಡ್ ಲೈನ್) ಹಾಗೂ ಡಬ್ಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ರಾಜ್ಯ ಸರ್ಕಾರ ಡಿಪಿಆರ್ ಸಲ್ಲಿಸಿತ್ತು. ಡಬಲ್ ಡೆಕ್ಕರ್ ವ್ಯವಸ್ಥೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ. ಹೆಬ್ಬಾಳ–ಸರ್ಜಾಪುರ ಮೆಟ್ರೋ ಕಾರಿಡಾರ್‌ಗೆ ಸಂಬಂಧಿಸಿದಂತೆ ₹28,405 ಕೋಟಿ ವೆಚ್ಚದ ವಿವರವಾದ ಯೋಜನಾ ವರದಿ (ಡಿಪಿಆರ್) ಅನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿತ್ತು.

5. ನಾನು ರಾಜಕಾರಣ ಮಾಡೋಕೇ ದಿಲ್ಲಿಗೆ ಬಂದಿರೋದು- ಡಿಕೆ ಶಿವಕುಮಾರ್

ನವದೆಹಲಿಯಲ್ಲಿರುವ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ದೆಹಲಿಯ 10 ಜನ್ ಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ‘‘ದೆಹಲಿಗೆ ಬಂದ ಮೇಲೆ ಎಲ್ಲಾ ವಿಚಾರ ಮಾತನಾಡಬೇಕು, ಅದನ್ನ ಮಾತನಾಡಿದ್ದೀನಿ. ಆದರೆ ಯಾರ್ಯಾರ ಹತ್ತಿರ ಏನೇನು ಮಾತನಾಡಿದೆ ಅಂತ ಬಹಿರಂಗವಾಗಿ ಹೇಳೋಕೆ ಆಗಲ್ಲ. ಒಳಗೆ ನಡೆದ ಚರ್ಚೆಯನ್ನು ಹೊರಗೆ ಹೇಳುವುದು ಸರಿಯಲ್ಲ’’. ‘‘ನಾನು ಇಲ್ಲಿಗೆ ಬಂದಿರೋದು ರಾಜಕಾರಣ ಮಾಡೋಕೆ, ಸುಮ್ಮನೆ ಗಾಳಿ ಕುಡಿದು ಹೋಗೋದಿಕ್ಕೆ ಅಲ್ಲ. ವರಿಷ್ಠರ ಬಳಿ ಏನು ಮಾತನಾಡಬೇಕೋ ಅದನ್ನ ಮಾತನಾಡಿದ್ದೀನಿ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ’’ ಎನ್ನುವ ಮೂಲಕ ಕುರ್ಚಿ ಕದನದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com