ಇಸ್ಲಾಮಾಬಾದ್: ಮತ್ತೋರ್ವ ಅಂತಾರಾಷ್ಟ್ರೀಯ ಕ್ರಿಕೆಟಿಗ ವಿಚ್ಛೇದನ ಘೋಷಿಸಿದ್ದು, ತಮ್ಮ 6 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡುತ್ತಿರುವುದಾಗಿ ಹೇಳಿದ್ದಾರೆ.
ಹೌದು.. ಪಾಕಿಸ್ತಾನಿ ಕ್ರಿಕೆಟಿಗ ಇಮಾದ್ ವಾಸಿಮ್ ತಮ್ಮ ಪತ್ನಿ ಸನಿಯಾ ಅಶ್ಫಾಕ್ ಅವರಿಂದ ವಿಚ್ಚೇದನ ಪಡೆಯುತ್ತಿದ್ದು, ಆ ಮೂಲಕ ತಮ್ಮ 6 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತ ತೆರೆ ಎಳೆದಿದ್ದಾರೆ.
ಇಮಾದ್ ವಾಸಿಮ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಘೋಷಣೆ ಮಾಡಿದ್ದು, ಅವರು ಆಗಸ್ಟ್ 2019 ರಲ್ಲಿ ತಮ್ಮ ಪತ್ನಿ ಸನಿಯಾ ಅವರನ್ನು ವಿವಾಹವಾಗಿದ್ದರು ಮತ್ತು ಆರು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಇದೀಗ ಬೇರ್ಪಡುತ್ತಿರುವುದಾಗಿ ಘೋಷಿಸಿದ್ದಾರೆ.
ಇಮಾದ್ ವಾಸಿಮ್ ತಮ್ಮ ಪೋಸ್ಟ್ ನಲ್ಲಿ ತಾವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಮತ್ತು ಎಲ್ಲರೂ ತಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಒತ್ತಾಯಿಸುವುದಾಗಿ ಹೇಳಿದ್ದಾರೆ. ಅಂತೆಯೇ ಅವರ ಹಳೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ವಿನಂತಿಸುವುದಾಗಿ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಬಹಳ ಯೋಚಿಸಿದ ನಂತರ ಮತ್ತು ಕಳೆದ ಕೆಲವು ವರ್ಷಗಳಿಂದ ಪರಿಹರಿಸಲಾಗದ ಪದೇ ಪದೇ ಘರ್ಷಣೆಗಳಿಂದಾಗಿ, ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಎಲ್ಲರೂ ನಮ್ಮ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ಯಾವುದೇ ಹಳೆಯ ದಂಪತಿಗಳ ಫೋಟೋಗಳನ್ನು ಬಳಸುವುದನ್ನು ಅಥವಾ ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ದಯವಿಟ್ಟು ಮುಂದೆ ಅವರನ್ನು ನನ್ನ ಸಂಗಾತಿ ಎಂದು ಉಲ್ಲೇಖಿಸುವುದನ್ನು ಸಹ ತಪ್ಪಿಸಿ' ಇಮಾದ್ ಮನವಿ ಮಾಡಿದ್ದಾರೆ.
ಅಲ್ಲದೆ "ಯಾವುದೇ ದಾರಿತಪ್ಪಿಸುವ ನಿರೂಪಣೆಗಳಲ್ಲಿ ತೊಡಗಿಸಿಕೊಳ್ಳಬೇಡಿ ಅಥವಾ ನಂಬಬೇಡಿ ಎಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಈ ವೈಯಕ್ತಿಕ ವಿಷಯದಲ್ಲಿ ಇತರರನ್ನು ದೂಷಿಸುವ ಅಥವಾ ಒಳಗೊಳ್ಳುವ ಯಾವುದೇ ಪ್ರಯತ್ನವನ್ನು ಅಗತ್ಯವಿದ್ದರೆ ಸರಿಯಾದ ಕಾನೂನು ಮಾರ್ಗಗಳ ಮೂಲಕ ಪರಿಹರಿಸಲಾಗುವುದು. ಮಕ್ಕಳ ವಿಷಯದಲ್ಲಿ, ನಾನು ಅವರ ತಂದೆಯಾಗಿಯೇ ಇರುತ್ತೇನೆ ಮತ್ತು ಅವರನ್ನು ಸಂಪೂರ್ಣವಾಗಿ ಮತ್ತು ಜವಾಬ್ದಾರಿಯುತವಾಗಿ ನೋಡಿಕೊಳ್ಳುವುದನ್ನು ಮುಂದುವರಿಸುತ್ತೇನೆ. ನಿಮ್ಮ ತಿಳುವಳಿಕೆ ಮತ್ತು ಗೌರವಕ್ಕೆ ಧನ್ಯವಾದಗಳು ಎಂದು ಇಮಾದ್ ಪೋಸ್ಟ್ ಮಾಡಿದ್ದಾರೆ.
ಪತಿ ವಿರುದ್ಧ ಕಿಡಿಕಾರಿದ್ದ ಸಾನಿಯಾ
ಇನ್ನು ಇದಕ್ಕೂ ಮೊದಲು ಇಮಾದ್ ಪತ್ನಿ ಸಾನಿಯಾ ಅಶ್ಫಾಕ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪತಿ ವಿರುದ್ಧವೇ ಪೋಸ್ಟ್ ಮಾಡಿದ್ದರು. "ಕೆಲವೊಮ್ಮೆ ಮನೆ ಧ್ವಂಸ ಮಾಡುವವರು ಯಶಸ್ವಿಯಾಗುತ್ತಾರೆ. ಕರ್ಮ ಇನ್ನೂ ದಾಖಲೆಗಳನ್ನು ಇಡುತ್ತದೆ" ಎಂದು ಪೋಸ್ಟ್ ಮಾಡಿದ್ದರು.