ತಿರುವನಂತಪುರಂ: ತಿರುವನಂತಪುರಂ ನಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ 4ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಲಂಕಾ ವಿರುದ್ಧ 30 ರನ್ ಗಳಿಂದ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಲಂಕಾಗೆ 222 ರನ್ ಗಳ ಗುರಿ ನೀಡಿತು. ಭಾರತದ ಪರ ಸ್ಮೃತಿ ಮಂಧಾನ 48 ಎಸೆತಗಳಲ್ಲಿ 80 ರನ್, ಶೆಫಾಲಿ ವರ್ಮಾ, 46 ಎಸೆತಗಳಲ್ಲಿ 79 ರನ್, ರಿಚಾ ಘೋಷ್ 16 ಎಸೆತಗಳಲ್ಲಿ 40 ರನ್, ಹರ್ಮನ್ ಪ್ರೀತ್ ಕೌರ್ 10 ಎಸೆತಗಳಲ್ಲಿ 16 ರನ್ ಗಳನ್ನು ಗಳಿಸಿದರು.
ಭಾರತ ನೀಡಿದ ರನ್ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಮಹಿಳಾ ತಂಡ, ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತು ಆದರೂ ಭಾರತದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ನಿಗದಿತ 20 ಓವರ್ ಗಳಲ್ಲಿ ಲಂಕಾ ತಂಡ 6 ವಿಕೆಟ್ ಗಳ ನಷ್ಟಕ್ಕೆ 191 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತ ಲಂಕಾ ವಿರುದ್ದ 30 ರನ್ ಗಳಿಂದ ಜಯ ಗಳಿಸಿದ್ದು, 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಲಂಕಾ ಗೆ ವೈಟ್ ವಾಷ್ ಭೀತಿ ಎದುರಾಗಿದೆ.