ಲಾಹೋರ್: ತ್ರಿಕೋನ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತೋರಿದ ವರ್ತನೆ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳೇ ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದು, ಧೈರ್ಯವಿದ್ದರೆ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತದ ವಿರುದ್ಧವೂ ಇಂತಹುದೇ ವರ್ತನೆ ತೋರಿ ಎಂದು ಸವಾಲು ಹಾಕುತ್ತಿದ್ದಾರೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನದಲ್ಲಿ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕ್ ನಡುವೆ ತ್ರಿಕೋನ ಸರಣಿ ನಡೆಯುತ್ತಿದ್ದು, ಸರಣಿಯ ಮೂರನೇ ಪಂದ್ಯ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಸಭ್ಯತೆಯನ್ನು ಮೀರಿ ನಡೆದುಕೊಂಡಿದ್ದಾರೆ.
ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಿತು. ಪಂದ್ಯದಲ್ಲಿ, ನಾಯಕ ಟೆಂಬಾ ಬವುಮಾ ಅದ್ಭುತ ಅರ್ಧಶತಕ ಗಳಿಸಿದರು. ಆದರೆ ದುರದೃಷ್ಟವಶಾತ್ ರನೌಟ್ ಆದರು.
ಈ ವೇಳೆ ಪಾಕಿಸ್ತಾನಿ ಆಟಗಾರರು ತುಂಬಾ ಆಕ್ರಮಣಕಾರಿಯಾಗಿ ಆಚರಿಸಿದರು. ಟೆಂಬಾನ ಸುತ್ತುವರೆದು ಮೈಮೇಲೆ ಬೀಳುವಂತೆ ವರ್ತನೆ ತೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಪಾಕಿಸ್ತಾನಿ ಆಟಗಾರರ ನಾಚಿಕೆಗೇಡಿನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಧೈರ್ಯ ಇದ್ದರೆ ಭಾರತದ ವಿರುದ್ಧವೂ ಅದೇ ವರ್ತನೆ ತೋರಿ
ಇನ್ನು ಪಾಕಿಸ್ತಾನಿ ಆಟಗಾರರ ಮೈದಾನದ ವರ್ತನೆ ಕೇವಲ ಇತರೆ ದೇಶಗಳ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ.. ಸ್ವತಃ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಅಭಿಮಾನಿಗಳಂತೂ ಧೈರ್ಯವಿದ್ದರೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ವಿರುದ್ಧವೂ ಇಂತಹುದೇ ವರ್ತನೆ ತೋರಿ ಎಂದು ಸವಾಲು ಎಸೆದಿದ್ದು ಮಾತ್ರವಲ್ಲದೇ ಭಾರತ ತಂಡ ನಿಮಗೆ ತಕ್ಕ ಶಾಸ್ತ್ರಿ ಮಾಡಲಿದೆ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನದ ಕೆಲ ಕ್ರೀಡಾ ವರದಿಗಾರರೂ ಕೂಡ ಇದೇ ವಿಚಾರವಾಗಿ ವಿಡಿಯೋಗಳನ್ನು ಮಾಡಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಶಾಹಿನ್ ಅಫ್ರಿದಿ ಅವರನ್ನು ಈ ಬಗ್ಗೆ ಕೇಳಿದಾಗ ಅವರು, ಇದು ನಮ್ಮ ಕಾರ್ಯತಂತ್ರವಾಗಿತ್ತು. ದಕ್ಷಿಣ ಆಫ್ರಿಕಾ ಮೇಲೆ ಒತ್ತಡ ಹೇರಲು ಕೆಲವೊಮ್ಮೆ ಈರೀತಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಭಾರತದ ವಿರುದ್ಧವೂ ಇಂತಹುದೇ ವರ್ತನೆ ತೋರುತ್ತೀರಾ ಎಂಬ ಪ್ರಶ್ನೆಗೆ ಆ ಸಮಯಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಛಾಟಿ ಬೀಸಿದ ICC, ಆಟಗಾರರಿಗೆ ದಂಡ
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಾಹೀನ್ ಅಫ್ರಿದಿ, ಸೌದ್ ಶಕೀಲ್ ಮತ್ತು ಕಮ್ರಾನ್ ಗುಲಾಮ್‌ಗೆ ದಂಡ ವಿಧಿಸಿದೆ. ಶಾಹೀನ್ ಅಫ್ರಿದಿಗೆ ಪಂದ್ಯ ಶುಲ್ಕದಲ್ಲಿ 25% ದಂಡವನ್ನು ಹೇರಲಾಗಿದ್ದು, ಸೌದ್ ಮತ್ತು ಕಮ್ರಾನ್‌ಗೆ ತಲಾ 10% ದಂಡ ವಿಧಿಸಲಾಗಿದೆ.