ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನ ಅಂತಿಮ ಪಂದ್ಯಗಳು ಇದೀಗ ಆಶ್ಚರ್ಯಕರ ರೀತಿಯಲ್ಲಿ ಮೈಸೂರಿನಲ್ಲಿ ನಡೆಯಲಿವೆ. ಸಾಮಾನ್ಯವಾಗಿ ಪ್ರತಿ ಬಾರಿ ಬೆಂಗಳೂರು, ಚೆನ್ನೈ, ಮುಂಬೈ, ಅಥವಾ ಹೈದರಾಬಾದ್‌ನಲ್ಲಿ ಸಿಸಿಎಲ್‌ನ ಅಂತಿಮ ಪಂದ್ಯಗಳು ನಡೆಯುತ್ತಿದ್ದವು. ಇದೀಗ ಸಿಸಿಎಲ್ 11ನೇ ಆವೃತ್ತಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಮಾರ್ಚ್ 1 ಮತ್ತು 2 ರಂದು ಮೈಸೂರಿನಲ್ಲಿ ನಡೆಯಲಿವೆ.
ನಟ ಮತ್ತು ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ಸಿಸಿಎಲ್ 2025 ನಮ್ಮ ಮೈಸೂರಿಗೆ ಬರುತ್ತಿದೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ. ಮಾರ್ಚ್ 1 ಮತ್ತು 2 ರಂದು ಮೈಸೂರಿನಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಬೆಂಬಲ ನೀಡಿದ್ದಕ್ಕಾಗಿ ಸಿಸಿಎಲ್ ಮತ್ತು KSCA ಗೆ ಧನ್ಯವಾದಗಳು. ನಾವು, ಕರ್ನಾಟಕ ಬುಲ್ಡೋಜರ್ಸ್ ನಿಮ್ಮೆಲ್ಲರನ್ನು ಅಲ್ಲಿ ನೋಡಲು ಎದುರು ನೋಡುತ್ತಿದ್ದೇವೆ. ಟಿಕೆಟ್‌ಗಳ ಲಭ್ಯತೆ ಮತ್ತು ಆನ್‌ಲೈನ್ ಮಾರಾಟ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಘೋಷಣೆಗಾಗಿ ನಿರೀಕ್ಷಿಸಿ..' ಎಂದು ಬರೆದಿದ್ದಾರೆ.
ಸಿಸಿಎಲ್‌ನ 2025 ನೇ ಆವೃತ್ತಿಯು ಫೆಬ್ರುವರಿ 7 ರಂದು ಪ್ರಾರಂಭವಾಯಿತು. ಆರಂಭದಲ್ಲಿ, ಬೆಂಗಳೂರು ಕೇವಲ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲು ನಿರ್ಧರಿಸಲಾಗಿತ್ತು. ಈವರೆಗೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಗೌಪ್ಯವಾಗಿಡಲಾಗಿತ್ತು.
ಟ್ರೋಫಿಗಾಗಿ 8 ತಂಡಗಳ ಸೆಣಸಾಟ
ಕರ್ನಾಟಕ ಬುಲ್ಡೋಜರ್ಸ್, ಮುಂಬೈ ಹೀರೋಸ್, ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್, ಬೆಂಗಾಲ್ ಟೈಗರ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್ ಮತ್ತು ಪಂಜಾಬ್ ಡಿ ಶೇರ್ ತಂಡಗಳು ಈ ಆವೃತ್ತಿಯಲ್ಲಿ ಆಡುತ್ತಿವೆ.