ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮುಜುಗರದಿಂದ ಪಾರಾಗಿದ್ದು, ಆರಂಭಿಕ ಆಘಾತದ ಹೊರತಾಗಿಯೂ ಭಾರತಕ್ಕೆ ಗೆಲ್ಲಲು 229ರನ್ ಗಳ ಸಾಧಾರಣ ಗುರಿ ನೀಡಿದೆ.
ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 49.4 ಓವರ್ ನಲ್ಲಿ 228 ರನ್ ಗಳಿಗೆ ಆಲೌಟ್ ಆಗಿದ್ದು, ಆ ಮೂಲಕ ಭಾರತಕ್ಕೆ ಗೆಲ್ಲಲು 229 ರನ್ ಗಳ ಸಾಧಾರಣ ಗುರಿ ನೀಡಿದೆ. ಭಾರತದ ಪರ ಮಹಮದ್ ಶಮಿ 5 ವಿಕೆಟ್ ಕಬಳಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಹರ್ಷಿತ್ ರಾಣಾ 3, ಅಕ್ಸರ್ ಪಟೇಲ್ 2 ವಿಕೆಟ್ ಪಡೆದರು.
ಆರಂಭಿಕ ಆಘಾತದಿಂದ ಹೊರಬಂದ ಬಾಂಗ್ಲಾದೇಶ
ಪಂದ್ಯದ ಆರಂಭದಲ್ಲಿ ಭಾರತೀಯ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿ ಹೋದ ಬಾಂಗ್ಲಾದೇಶ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 35 ರನ್ ಗಳ ಅಂತರದಲ್ಲಿ ಬಾಂಗ್ಲಾದೇಶ ತಂಡ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಪೈಕಿ ಮೂವರು ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿದ್ದು, ಬಾಂಗ್ಲಾದೇಶಕ್ಕೆ ನುಂಗಲಾರದ ತುತ್ತಾಯಿತು. ಈ ಹಂತದಲ್ಲಿ ಜೊತೆಗೂಡಿದ ತೌಹೀದ್ ಹೃದೋಯ್ ಮತ್ತು ಜೇಕರ್ ಅಲಿ ಬಾಂಗ್ಲಾದೇಶ ತಂಡವನ್ನು ಮುಜುಗರದಿಂದ ಪಾರು ಮಾಡಿದರು.
ಈ ಜೋಡಿ ಬಾಂಗ್ಲಾದೇಶ ಪರ 154 ರನ್ ಗಳ ಅಮೋಘ ಜೊತೆಯಾಟವಾಡಿತು. ಜೇಕರ್ ಅಲಿ 114 ಎಸೆತಗಳಲ್ಲಿ 64 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ ಔಟಾದರೆ, ಹೃದೋಯ್ 118 ಎಸೆತಗಳಲ್ಲಿ ಶತಕ ಸಿಡಿಸಿ ಇನ್ನಿಂಗ್ಸ್ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ಜೇಕರ್ ಅಲಿ ಬಳಿಕ ರಿಶಾದ್ ಹುಸೇನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರೂ ಅವರ ರನ್ ಗಳಿಕೆ 18ಕ್ಕೇ ಸೀಮಿತವಾಯಿತು. ಅಂತಿಮವಾಗಿ ಬಾಂಗ್ಲಾದೇಶ ತಂಡ 49.4 ಓವರ್ ನಲ್ಲಿ 228 ರನ್ ಗಳಿಗೆ ಆಲೌಟ್ ಆಯಿತು.