ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಯಾವುದೇ ಆಟಗಾರರ ಬದಲಾವಣೆ ಮಾಡದೇ ಕಣಕ್ಕಿಳಿದಿದ್ದು, ಇದೇ ವಿಚಾರವಾಗಿ ಸುನಿಲ್ ಗವಾಸ್ಕರ್ ಮಾತನಾಡಿ ಟೀಂ ಇಂಡಿಯಾ ಬೆಂಚ್ ಸ್ಟ್ರೆಂಥ್ ಬಳಕೆ ಬಗ್ಗೆ ಮಾತನಾಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಪಾಕಿಸ್ತಾನದ ವಿರುದ್ಧದ ಎರಡನೇ ಗ್ರೂಪ್ ಎ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ರಿಷಭ್ ಪಂತ್, ವರುಣ್ ಚಕ್ರವರ್ತಿ, ಅರ್ಶ್‌ದೀಪ್ ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರನ್ನು ಬೆಂಚ್‌ನಲ್ಲಿ ಕುಳ್ಳಿರಿಸಲಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಹಾಗೂ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ತಂಡದಲ್ಲಿ ಪ್ರಸ್ತುತ ಭಾರತ ಬದಲಾವಣೆಗಳನ್ನು ಮಾಡುವ ಅಗತ್ಯವಿಲ್ಲ.. ಹಾಲಿ ಇರುವ ತಂಡ ಬಲಿಷ್ಠವಾಗಿದ್ದು, ಬೇರೆ ಆಟಗಾರರ ಅವಶ್ಯಕತೆ ಕಾಣುತ್ತಿಲ್ಲ ಎಂದು ಹೇಳಿದರು.
ದುಬೈ ಕ್ರೀಡಾಂಗಣದಲ್ಲಿ ನಿಧಾನಗತಿಯ ಪಿಚ್ ಇದ್ದು, ಪ್ರಸ್ತುತ ಭಾರತ ತಂಡದ ಸಂಯೋಜನೆ ಉತ್ತಮವಾಗಿದೆ. ಹೀಗಾಗಿ ತಂಡದ ಬದಲಾವಣೆಯ ಅಗತ್ಯತೆ ಕಾಣುತ್ತಿಲ್ಲ. ಒಂದು ಬದಲಾವಣೆ ಮಾಡಲೇಬು ಎಂದಾದರೆ ವರುಣ್ ಚಕ್ರವರ್ತಿ ತಂಡಕ್ಕೆ ತರಬೇಕು. ಆದರೆ ಇದಕ್ಕೆ ಹಾಲಿ ಬೌಲರ್ ಗಳು ಅವಕಾಶವನ್ನೇ ನೀಡುತ್ತಿಲ್ಲ.
ಕಳೆದ ಪಂದ್ಯದಲ್ಲಿ ಮೊಹಮ್ಮದ್ ಶಮಿ 5 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಹರ್ಷಿತ್ ರಾಣಾ ಯಾವುದೇ ತಪ್ಪು ಮಾಡಲಿಲ್ಲ ಎಂದರು.
ಸೇಡಿನ ಪಂದ್ಯ
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು 2017 ರ ಆವೃತ್ತಿಯ ಫೈನಲ್‌ನಲ್ಲಿ. ಅಂದು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು. ಈ ಹೀನಾಯ ಸೋಲಿನ ಪ್ರತೀಕಾರಕ್ಕೆ ಭಾರತ ತಂಡ ಸಜ್ಜಾಗಿದೆ.