ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕೇವಲ 5 ದಿನಗಳಲ್ಲೇ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದಿದ್ದು, ಈ ಬೆಳವಣಿಗೆ ಕುರಿತು ಮಾತನಾಡಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಪಾಕಿಸ್ತಾನ ಕ್ರಿಕೆಟ್ ಸರ್ವನಾಶ ಎಂದು ಬಣ್ಣಿಸಿದ್ದಾರೆ.
ಕರಾಚಿಯಲ್ಲಿ ನ್ಯೂಜಿಲೆಂಡ್ ಮತ್ತು ದುಬೈನಲ್ಲಿ ಭಾರತ ವಿರುದ್ಧದ ದೊಡ್ಡ ಸೋಲಿನ ನಂತರ ಎಂಟು ತಂಡಗಳ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೆ ಪಾಕಿಸ್ತಾನ ಭಾಜನವಾಗಿದೆ. ಅಲ್ಲದೆ ಐಸಿಸಿ ಟೂರ್ನಿ ಆಯೋಜಿಸಿ ಒಂದೂ ಪಂದ್ಯ ಗೆಲ್ಲದೇ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಅಪಕೀರ್ತಿಗೂ ಪಾಕಿಸ್ತಾನ ಭಾಜನವಾಗಿದೆ.
ಪ್ರಸ್ತುತ ಜೈಲಿನಲ್ಲಿರುವ ಇಮ್ರಾನ್ ಖಾನ್ ಕ್ರಿಕೆಟ್ ಕುರಿತಂತೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾತನಾಡಿದ್ದು, ತಮ್ಮ ದೇಶದ ಕ್ರಿಕೆಟ್ ತಂಡದ ಪ್ರಸ್ತುತ ಚಾಂಪಿಯನ್ಸ್ ಟ್ರೋಫಿ ಪ್ರದರ್ಶನದಿಂದ ಬೇಸರಗೊಂಡಿದ್ದಾರೆ ಎಂದು ಅವರ ಸಹೋದರಿ ಅಲೀಮಾ ಖಾನ್ ಹೇಳಿದ್ದಾರೆ.
ಪಿಟಿಐ (ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್) ಸಂಸ್ಥಾಪಕ ಇಮ್ರಾನ್ ಖಾನ್ ಭಾರತದ ವಿರುದ್ಧದ ಪಂದ್ಯವನ್ನು ಸೋತಿದ್ದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದರು ಎಂದು ಅಲೀಮಾ ಖಾನ್ ಹೇಳಿದ್ದಾರೆ. ಅಲೀಮಾ ರಾವಲ್ಪಿಂಡಿಯ ಅಡಿಯಾಲಾ ಜೈಲಿನ ಹೊರಗೆ ಮಾಧ್ಯಮಗಳಿಗೆ ಈ ಬಗ್ಗೆ ತಿಳಿಸಿದರು.
ನೆಚ್ಚಿನ ತಂಡಗಳನ್ನು ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಇರಿಸಿದಾಗ ಕ್ರಿಕೆಟ್ ಅಂತಿಮವಾಗಿ ನಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಇಮ್ರಾನ್ ಖಾನ್ ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಕ್ರಿಕೆಟ್ ಜವಾಬ್ದಾರಿಗಳನ್ನು ಸಹ ಪ್ರಶ್ನಿಸಿದ್ದಾರೆ.
ಅಂದಹಾಗೆ 2019 ರಲ್ಲಿ, ಅಂದಿನ ಪ್ರಧಾನಿ ಇಮ್ರಾನ್ ಅವರ ನಿರ್ದೇಶನದ ಮೇರೆಗೆ ಪಿಸಿಬಿ ದೇಶೀಯ ಕ್ರಿಕೆಟ್ ರಚನೆಯನ್ನು ಪರಿಷ್ಕರಿಸಿತ್ತು. ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುವ 16-18 ವಿಭಾಗೀಯ ಮತ್ತು ಪ್ರಾದೇಶಿಕ ಸಂಘಗಳ ಹಳೆಯ ವ್ಯವಸ್ಥೆಯನ್ನು ಕೊನೆಗೊಳಿಸಿತು ಮತ್ತು ಆರು ತಂಡಗಳ ಪ್ರಥಮ ದರ್ಜೆ ರಚನೆಯನ್ನು ಪರಿಚಯಿಸಲಾಯಿತು.
ನಂತರ 2021 ರಲ್ಲಿ ಇಮ್ರಾನ್ ಖಾನ್ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು. ಇಮ್ರಾನ್ ಖಾನ್ ಸರ್ಕಾರದ ಪತನದ ನಂತರ ಡಿಸೆಂಬರ್ 2022ರಲ್ಲಿ ಸೇಥಿ ಅವರು ರಮೀಜ್ ಅವರನ್ನು ಬದಲಾಯಿಸಿದರು.