ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಲಾಹೋರ್‌ನಲ್ಲಿ ನಡೆದ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಜಯಗಳಿಸಿದ ನಂತರ ಅಭಿಮಾನಿಯೊಬ್ಬರು ಮತ್ತೊಮ್ಮೆ ಮೈದಾನಕ್ಕೆ ನುಗ್ಗಿದ್ದಾರೆ. ಭದ್ರತೆಯ ನಡುವೆಯೂ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿ, ಆಟಗಾರರನ್ನು ಅಪ್ಪಿಕೊಳ್ಳಲು ಓಡಿ ಬಂದರು. ಆದರೆ, ಭದ್ರತಾ ಅಧಿಕಾರಿಗಳು ಅವರನ್ನು ಹಿಡಿದು ಮೈದಾನದಿಂದ ಹೊರಗೆ ಕರೆದೊಯ್ದರು.
ಸೋಮವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಸಮಯದಲ್ಲಿಯೂ ಅಭಿಮಾನಿಯೊಬ್ಬರು ಮೈದಾನಕ್ಕೆ ಓಡಿ ಬಂದು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅವರನ್ನು ಅಪ್ಪಿಕೊಳ್ಳಲು ಯತ್ನಿಸಿದ್ದರು. ಇವೆರಡು ಘಟನೆಯ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭದ್ರತಾ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
'ನಿನ್ನೆ ಪ್ರೇಕ್ಷಕರೊಬ್ಬರು ಆಟದ ಮೈದಾನಕ್ಕೆ ಪ್ರವೇಶಿಸಿದಾಗ ಸಂಭವಿಸಿದ ಭದ್ರತಾ ಉಲ್ಲಂಘನೆಯನ್ನು ಪಿಸಿಬಿ ಗಂಭೀರವಾಗಿ ಪರಿಗಣಿಸಿದೆ. ಆಟಗಾರರು ಮತ್ತು ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ' ಎಂದು ಮಂಡಳಿ ತಿಳಿಸಿರುವುದಾಗಿ ಮಂಗಳವಾರ ಡಾನ್ ತಿಳಿಸಿದೆ.
'ಸಂಬಂಧಿತ ವ್ಯಕ್ತಿಯನ್ನು ಇಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇದಲ್ಲದೆ, ಪಾಕಿಸ್ತಾನದ ಎಲ್ಲ ಕ್ರಿಕೆಟ್ ಸ್ಟೇಡಿಯಂಗಳಿಗೆ ಪ್ರವೇಶಿಸದಂತೆ ಅವರಿಗೆ ಶಾಶ್ವತವಾಗಿ ನಿಷೇಧ ಹೇರಲಾಗಿದೆ' ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಆದಾಗ್ಯೂ, ಇದೇ ರೀತಿಯ ಘಟನೆಗಳು ಮತ್ತೆ ಮರುಕಳಿಸುತ್ತಿದ್ದು, ಪಿಸಿಬಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.