ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಪಂದ್ಯದ ಮೊದಲ ದಿನ ಹಲವು ನಾಟಕೀಯ ಘಟನೆಗಳು ನಡೆದಿದ್ದು, ಪ್ರಮುಖವಾಗಿ ಭಾರತ ತಂಡದ ನಾಯಕ ಜಸ್ ಪ್ರೀತ್ ಬುಮ್ರಾ ಮತ್ತು ಆಸ್ಟ್ರೇಲಿಯಾ ಸ್ಯಾಮ್ ಕಾನ್ಸ್ಟಾಸ್ ನಡುವಿನ ಸಂಘರ್ಷ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 185 ರನ್ ಗಳಿಗೇ ಆಲೌಟ್ ಆಯಿತು. ಭಾರತದ ಪರ ರಿಷಬ್ ಪಂತ್ (40 ರನ್)ರನ್ನು ಹೊರತು ಪಡಿಸಿದರೆ ಉಳಿದಾವ ಆಟಗಾರರಿಂದಲೂ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ. ಹೀಗಾಗಿ ಭಾರತ ಕೇವಲ 185 ರನ್ ಗಳಿಗೇ ಆಲೌಟ್ ಆಯಿತು.
ಬಳಿಕ ದಿನದಾಟದ ಅಂತ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಕೂಡ ನಿಧಾನಗತಿಯ ಬ್ಯಾಟಿಂಗ್ ಗೆ ಮೊರೆ ಹೋಯಿತು ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಯಾಮ್ ಕಾನ್ಸ್ಟಾಸ್ ಮತ್ತು ಉಸ್ಮಾನ್ ಖವಾಜ 3 ಓವರ್ ಆಡಿ 9 ರನ್ ಗಳಿಸಿದರು.
ಈ ವೇಳೆ ದಿನದ ಕೊನೆಯ ಓವರ್ ಬೌಲ್ ಮಾಡಲು ನಾಯಕ ಬುಮ್ರಾ ಆಗಮಿಸಿದರು. ದಿನದ ಅಂತಿಮ ಓವರ್ ಆಗಿದ್ದರಿಂದ ಭಾರತ ವಿಕೆಟ್ ಗಾಗಿ ಕಾತರದಿಂದ ಕಾಯುತ್ತಿತ್ತು. ಈ ಹಂತದಲ್ಲಿ ತಮ್ಮನ್ನು ಕೆಣಕಿದ ಕಾನ್ಸ್ಟಾಸ್ ಗೆ ಬುಮ್ರಾ ಸಿನಿಮೀಯ ರೀತಿಯಲ್ಲಿ ಉತ್ತರ ನೀಡಿದರು.
'ಏನ್ ಗುರು ವಿಕೆಟ್ ಬೀಳ್ತಿಲ್ವಾ...' ಎಂದ Sam Konstas
ದಿನದ ಅಂತಿಮ ಓವರ್ ನ ಅಂತಿಮ ಎಸೆತಕ್ಕೂ ಮುನ್ನ ಸಿಡ್ನಿ ಮೈದಾನದಲ್ಲಿ ಅಕ್ಷರಶಃ ನಾಟಕೀಯ ಬೆಳವಣಿಗೆಗಳು ನಡೆಯಿತು. ಒಂದೆಡೆ ಅಂತಿಮ ಎಸೆತ ಎದುರಿಸಲು ಆಸಿಸ್ ನ ಉಸ್ಮಾನ್ ಖವಾಜ ಸಿದ್ಧವಾಗುತ್ತಿದ್ದರೆ ಮತ್ತೊಂದೆ ಬುಮ್ರಾ ಬೌಲ್ ತೆಗೆದುಕೊಂಡು ತಮ್ಮ ಪೆವಿಲಿಯನ್ ಎಂಡ್ ನಲ್ಲಿ ಕಾಯುತ್ತಿದ್ದರು.
ಈ ವೇಳೆ ಖವಾಜ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದರಿಂದ ಬುಮ್ರಾ ತಮ್ಮ ಫೋಕಸ್ ಡಿಸ್ಟರ್ಬ್ ಆಗುತ್ತಿದೆ... ಬೇಗ ಬ್ಯಾಟಿಂಗ್ ಗೆ ಸಿದ್ದರಾಗುವಂತೆ ಖವಾಜಾಗೆ ಹೇಳಿದ್ದಾರೆ. ಈ ವೇಳೆ ಬುಮ್ರಾರನ್ನು ಕೆಣಕಿದ ಸ್ಯಾಮ್ ಕಾನ್ಸ್ಟಾಸ್ 'ಯಾಕೆ ವಿಕೆಟ್ ಪಡೆಯಲು ಪರದಾಡುತ್ತಿದ್ದೀರಾ' ಎಂದು ಕೆಣಕಿದ್ದಾರೆ. ಈ ವೇಳೆ ಇದಕ್ಕೆ ಉತ್ತರಿಸಿದ ಬುಮ್ರಾ, 'ಕಾದು ನೋಡು' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಮರು ಎಸೆತದಲ್ಲೇ ಖವಾಜರನ್ನು ಔಟ್ ಮಾಡಿದ್ದಾರೆ.
ಬುಮ್ರಾ ಎಸೆದ ಫುಲ್ಲರ್ ಲೆಂತ್ ಎಸೆತವನ್ನು ಖವಾಜ ರಕ್ಷಣಾತ್ಮಕವಾಗಿ ಆಡಲು ಮುಂದಾದರು. ಈ ವೇಳೆ ಚೆಂಡು ಖವಾಜ ಬ್ಯಾಟ್ ಗೆ ಎಡ್ಜ್ ಆಗಿ ನೇರವಾಗಿ ಕೆಎಲ್ ರಾಹುಲ್ ಕೈಗೆ ಸೇರಿದೆ. ಕೂಡಲೇ ಬುಮ್ರಾ ನೇರವಾಗಿ ಸ್ಯಾಮ್ ಕಾನ್ಸ್ಟಾಸ್ ಬಳಿ ಹೋಗಿ ವಿಕೆಟ್ ಬಿತ್ತು ಎಂಬರ್ಥದಲ್ಲಿ ಅವರನ್ನು ನೋಡಿದ್ದಾರೆ. ಇದಕ್ಕೆ ಉತ್ತರ ನೀಡದ ಕಾನ್ಸ್ಟಾಸ್ ಮರು ಮಾತನಾಡದೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.