ಸಿಡ್ನಿ: 2024-25ರ ಬಾರ್ಡರ್- ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ಉಳಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಸರಾಸರಿ 6.2 ರಷ್ಟು ರನ್ ಗಳಿಸಿದ್ದಾರೆ. ಅತಿ ಹೆಚ್ಚು ಅಂದರೆ 10 ರನ್ ಮಾತ್ರ. 2024 ICC ಪುರುಷರ ಟಿ-20 ವಿಶ್ವಕಪ್ ನಾಯಕತ್ವದ ನಂತರ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ.
ಈ ಮಧ್ಯೆ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ರೋಹಿತ್ ಶರ್ಮಾ ನಿರ್ಧಾರ ಕುರಿತು ಪ್ರತಿಕ್ರಿಯಿಸಿರುವ ರಿಕಿ ಪಾಂಟಿಂಗ್, ಇದು ಮುಂದೆ ಟೆಸ್ಟ್ ನಲ್ಲಿ ಕಂಬ್ಯಾಕ್ ಆಗಲು ರೋಹಿತ್ ಶರ್ಮಾ ಅವರಿಗೆ ಕಷ್ಟವಾಗಬಹುದು ಎಂದಿದ್ದಾರೆ.
ರೋಹಿತ್ ಶರ್ಮಾ ಪಂದ್ಯದಿಂದ ಹೊರಗುಳಿಯಬಹುದು ಎಂದು ಭಾರತೀಯ ತಂಡ ಭಾವಿಸಿತ್ತು. ಅದರಂತೆ ಆಗಿದೆ ಅನಿಸುತ್ತಿದೆ.ರೋಹಿತ್ ಶರ್ಮಾ ಆಡಲ್ಲ, ಶುಭಮನ್ ಗಿಲ್ ಕಂಬ್ಯಾಕ್ ಆಗಲಿದ್ದು, ಜಸ್ಪ್ರೀತ್ ಬೂಮ್ರಾ ಮತ್ತೆ ತಂಡವನ್ನು ಮುನ್ನಡೆಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಈ ಸಂಬಂಧ ಕಳೆದ ಕೆಲವು ದಿನಗಳಿಂದ ಮಾತುಕತೆ ನಡೆದಿದ್ದು, ಅದೇ ರೀತಿ ನಡೆದಿದೆ ಎಂದು ಐಸಿಸಿ ರಿವ್ಯೂ ಶೋನಲ್ಲಿ ಪಾಂಟಿಂಗ್ ಹೇಳಿದ್ದಾರೆ.
ಟೆಸ್ಟ್ ಮಾದರಿಯಲ್ಲಿ ರೋಹಿತ್ ಶರ್ಮಾ ಈಗ ಹಿಂದೆ ಬಿದಿದ್ದು, ಜೂನ್ ಮಧ್ಯಭಾಗ ಅಥವಾ ಅಂತ್ಯದವರೆಗೂ ಭಾರತ ತಂಡ ಟೆಸ್ಟ್ ಆಡುವುದಿಲ್ಲ ಅನಿಸುತ್ತದೆ. ರೋಹಿತ್ ಶರ್ಮಾ ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಮುಂದೆ ಅವರು ಕಂಬ್ಯಾಕ್ ಆಗಲು ಕಷ್ಟವಾಗಬಹುದು. ರೋಹಿತ್ ಶರ್ಮಾ ಭಾರತ ತಂಡದ ಅದ್ಬುತ ಆಟಗಾರರಾಗಿದ್ದು, ಅವರು ಮತ್ತೆ ಟೆಸ್ಟ್ ಗೆ ಮರಳಿ ಎಂಬ ಭರವಸೆ ಬಹುಶಃ ಕಷ್ಟಕರವಾಗಿರುತ್ತದೆ ಅನಿಸುತ್ತದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.