ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ನಡುವೆ ಭಾರತ ತಂಡದ ಸ್ಟ್ಯಾಂಡ್-ಇನ್ ನಾಯಕ ಜಸ್ಪ್ರೀತ್ ಬುಮ್ರಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪಂದ್ಯದ ನಡುವೆ ಗಾಯದಿಂದಾಗಿ ಮೈದಾನದಿಂದ ಹೊರನಡೆದಿದ್ದ ಬುಮ್ರಾಗೆ ಎಷ್ಟು ಪ್ರಮಾಣದಲ್ಲಿ ಗಾಯಗಳಾಗಿವೆ ಎಂಬ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ವಿಶ್ವದ ನಂ.1 ವೇಗದ ಬೌಲರ್ ಸ್ಕ್ಯಾನ್ ಮಾಡಿಸುವ ಸಲುವಾಗಿ ವೈದ್ಯರೊಂದಿಗೆ ಮೈದಾನವನ್ನು ತೊರೆದಿದ್ದಾರೆ.
ಬುಮ್ರಾ ಅನುಪಸ್ಥಿತಿಯಲ್ಲಿ ಸದ್ಯ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸರಣಿಯಲ್ಲಿ ಈಗಾಗಲೇ 32 ವಿಕೆಟ್‌ಗಳನ್ನು ಪಡೆದಿರುವ ಬುಮ್ರಾ, ಬೆಳಗಿನ ಅವಧಿಯಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಔಟ್ ಮಾಡುವ ಮೂಲಕ 10 ಓವರ್‌ಗಳಲ್ಲಿ 33 ರನ್ ಗೆ 2 ವಿಕೆಟ್ ಪಡೆದಿದ್ದರು. ಶನಿವಾರದ ದಿನದಾಟದಲ್ಲಿ ಆರಂಭದಿಂದಲೇ ಆಸೀಸ್ ಬ್ಯಾಟರ್‌ಗಳಿಗೆ ಕಂಟಕರಾದ ಬುಮ್ರಾ, ಊಟದ ಸಮಯದಲ್ಲಿ ಮೊದಲ ಬಾರಿಗೆ ಮೈದಾನವನ್ನು ತೊರೆದರು. ನಂತರ ಬಂದು 1 ಓವರ್ ಬೌಲಿಂಗ್ ಮಾಡಿ ಗಾಯದ ಕಾರಣ ಮೈದಾನದಿಂದ ಹೊರನಡೆದರು.
ಮೈದಾನದಿಂದ ಹೊರಡುವುದಕ್ಕೂ ಮೊದಲು, ಕೊಹ್ಲಿಯೊಂದಿಗೆ ಬುಮ್ರಾ ತ್ವರಿತ ಮಾತುಕತೆ ನಡೆಸಿರುವುದು ಕಂಡುಬಂದಿದೆ. ಬಹುಶಃ, ಬೌಲಿಂಗ್ ಮಾಡುವಾಗ ಅವರಿಗಾದ ಅಸ್ವಸ್ಥತೆಯ ಬಗ್ಗೆ ಕೊಹ್ಲಿಗೆ ಹೇಳಿರುವ ಸಾಧ್ಯತೆ ಇದೆ. ಆ ನಂತರ ಕೊಹ್ಲಿ ನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು SUV ಯಲ್ಲಿ ಕ್ರೀಡಾಂಗಣದಿಂದ ಹೊರಡುವ ದೃಶ್ಯಗಳನ್ನು ಫಾಕ್ಸ್ ಸ್ಪೋರ್ಟ್ಸ್ ಚಾನೆಲ್ ತೋರಿಸಿದೆ.