ಆ್ಯಂಡರ್ಸನ್-ತೆಂಡೂಲ್ಕರ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 336 ರನ್‌ಗಳ ಬೃಹತ್ ಗೆಲುವು ಸಾಧಿಸಿ, ಐದು ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಿದ್ದಕ್ಕೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೀಂದರ್ ಖನ್ನಾ ಶ್ಲಾಘಿಸಿದ್ದಾರೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೋಲುಗಳು ಭಾರತವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಫೈನಲ್‌ನಿಂದ ಹೊರಗೆ ತಳ್ಳಿದ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಬಹಳಷ್ಟು ಟೀಕೆಗಳು ಕೇಳಿಬಂದಿದ್ದವು.
'ಗಂಭೀರ್ ಅವರ ಅಧಿಕಾರಾವಧಿಯಲ್ಲಿ ನಾವು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಸೋತಿದ್ದೇವೆ. ಆದರೆ, ಈಗ ಎರಡನೇ ಟೆಸ್ಟ್ ಪಂದ್ಯ ಗೆದ್ದಿರುವುದರಿಂದ ಅವರಿಗೆ ಲೈಫ್ ಲೈನ್ ಸಿಕ್ಕಂತಾಗಿದೆ. ಇದರ ಕ್ರೆಡಿಟ್ ಶುಭಮನ್ ಗಿಲ್ ಮತ್ತು ತಂಡಕ್ಕೆ ಸಲ್ಲುತ್ತದೆ. ಇಲ್ಲಿಂದ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕ್ರಿಕೆಟ್ ಅದ್ಭುತವಾದ ಅನಿಶ್ಚಿತತೆಯಿಂದ ಕೂಡಿರುವ ಆಟ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ, ಫಲಿತಾಂಶಗಳು ಬರುತ್ತವೆ. ಮುಂದಿನ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಮತ್ತೆ ಬರುತ್ತಾರೆ ಎಂದು ಆಶಿಸುತ್ತೇವೆ, ಅದು ಖಂಡಿತವಾಗಿಯೂ ತಂಡಕ್ಕೆ ಮತ್ತಷ್ಟು ಸಹಾಯವಾಗುತ್ತದೆ' ಎಂದು ಖನ್ನಾ ಐಎಎನ್‌ಎಸ್‌ಗೆ ತಿಳಿಸಿದರು.
ನಾಯಕ ಶುಭಮನ್ ಗಿಲ್ ಎರಡು ಇನಿಂಗ್ಸ್‌ಗಳಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ 430 ರನ್ ಗಳಿಸಿದರು. ಇದು ಟೆಸ್ಟ್ ಪಂದ್ಯವೊಂದರಲ್ಲಿ ಭಾರತೀಯರೊಬ್ಬರು ಗಳಿಸಿದ ಅತಿ ಹೆಚ್ಚು ರನ್‌ಗಳಾಗಿದ್ದು, ಗೆಲುವಿಗೆ ಕಾರಣವಾಯಿತು.
ನಾಯಕನಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ಗಿಲ್ ಬಗ್ಗೆ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
'ತಂಡವನ್ನು ಮುನ್ನಡೆಸುತ್ತಿರುವ ನಾಯಕ ಶುಭಮನ್ ಗಿಲ್, ಒಂದೇ ಇನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ ಮೊದಲ ನಾಯಕ. ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ತಲಾ ಆರು ವಿಕೆಟ್ ಪಡೆದಿದ್ದಾರೆ. ತಂಡದ ಗೆಲುವಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮೊದಲ ಟೆಸ್ಟ್ ನಂತರ ದೀರ್ಘ ಇನಿಂಗ್ಸ್ ಆಡುವ ಅಗತ್ಯವಿದೆ ಎಂದು ಗಿಲ್ ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದು ಪ್ರಾಯೋಗಿಕವಾಗಿತ್ತು. ಅವರಿನ್ನು ಚಿಕ್ಕವರು, ಅವರಿಗೆ ಸಮಯ ನೀಡಿ' ಎಂದು ಅವರು ಹೇಳಿದರು.
ಈ ಗೆಲುವಿನಿಂದ ಬೀಗದೆ ತಂಡವು ಮುಂದಿನ ಪಂದ್ಯ ಗೆಲ್ಲಲು ಏನು ಮಾಡಬೇಕು ಎನ್ನುವುದರತ್ತ ಗಮನಹರಿಸಬೇಕು. ಏಕೆಂದರೆ, ಕ್ರಿಕೆಟ್ ಒಂದು ದೊಡ್ಡ ವಿನಮ್ರ ಆಟ ಎಂದು ಹೇಳಿದರು|
'ಇದೀಗ ಹವಾಮಾನ ಪರಿಸ್ಥಿತಿಗಳು ಭಾರತಕ್ಕೆ ಸಹಾಯ ಮಾಡುತ್ತಿವೆ. ಬೌಲಿಂಗ್ ಪರಿಸ್ಥಿತಿಗಳು ಯಾವಾಗ ಬದಲಾಗಬಹುದು ಮತ್ತು ತೊಂದರೆಗಳು ಉಂಟಾಗಬಹುದು ಎಂದು ನಿಮಗೆ ತಿಳಿದಿಲ್ಲ. ನಮ್ಮ ತಂಡವು ಆಕ್ರಮಣಕಾರಿ ವಿಧಾನದೊಂದಿಗೆ T20 ಆಟಗಾರರನ್ನು ಹೊಂದಿದೆ' ಎಂದರು.